ನ್ಯೂಸ್ ನಾಟೌಟ್: ವಿದೇಶದಲ್ಲಿ ಕೆಲಸ ಮಾಡಬೇಕು ಕೈತುಂಬಾ ಸಂಬಳ ತೆಗೆದುಕೊಳ್ಳಬೇಕು ಎನ್ನುವುದು ಜೀವನದಲ್ಲಿ ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಇಲ್ಲೊಬ್ಬ ಯುವಕ ವಿದೇಶದಲ್ಲಿ ಒಳ್ಳೆಯ ಕೆಲಸ, ಕೈ ತುಂಬಾ ವೇತನವನ್ನು ಬಿಟ್ಟು ಊರಿಗೆ ಬಂದು ತರಬೇತಿ ಪಡೆದು ಭಾರತೀಯ ಸೈನ್ಯ ಸೇರಿ ಸುದ್ದಿಯಾಗಿದ್ದಾರೆ. ಯುವಕನ ಹೆಸರು ಸಾತ್ವಿಕ ಕುಳಮರ್ವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಎಲೆಕ್ಟ್ರಿಕ್ ಎಂಜಿನೀಯರಿಂಗ್ ನಲ್ಲಿ ಎಂಎಸ್ ಪದವಿ ಪಡೆದು ಅಮೆರಿಕದಲ್ಲಿ ಒಳ್ಳೆಯ ಕೆಲಸದಲ್ಲಿದ್ದರೂ ಭಾರತಕ್ಕೆ ಮರಳಿ ಬಂದು ತಕ್ಕ ತರಬೇತಿ ಪಡೆದು ಭಾರತೀಯ ಸೇನೆಗೆ ನಿಯೋಜನೆಗೊಂಡಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸಾತ್ವಿಕ ಕುಳಮರ್ವ ಭಾರತೀಯ ಸೇನಾಪಡೆಯ ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಲೆಪ್ಟಿನೆಂಟ್ ಆಗಿ ಆಯ್ಕೆ ಆಗಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪ್ರೊ.ಗಣಪತಿ ಭಟ್ ಕುಳಮರ್ವ ಮತ್ತು ಪಿಯು ಕಾಲೇಜು ಉಪನ್ಯಾಸಕಿ ಪಿ.ವಸಂತಿ ದಂಪತಿ ಪುತ್ರರಾದ ಸಾತ್ವಕ್ ಜಮ್ಮುವಿನ ಸಾತ್ವಾರಿಯಲ್ಲಿ 26 ಐಡಿಎಸ್ಆರ್ (ಇನ್ ಫೆಂಟ್ರಿ ಡಿವಿಶನ್ ಸಿಗ್ನಲ್ಸ್ ರೆಜಿಮೆಂಟ್) ನಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನಿಯೋಜನೆಗೊಂಡಿದ್ದಾರೆ. ಜೂನ್ 10 ರಂದು ಶುಕ್ರವಾರ ಡೆಹ್ರಾಡೂನ್ ನಲ್ಲಿ ನಡೆದ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಡೇ ಪರೇಡ್ ನಲ್ಲಿ ಪಾಲ್ಗೊಂಡ 288 ಯುವಕರಲ್ಲಿ ಸಾತ್ವಿಕ್ ಸಹ ಒಬ್ಬರು. ಎಲ್ಲಾ ಕೆಡೆಟ್ ಗಳಿಗೆ ಮೂರು ವಾರ ವಿಶ್ರಾಂತಿ ನೀಡಿದ್ದು, ಬಳಿಕ ತಾವು ನಿಯೋಜನೆಗೊಂಡ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಸಾತ್ವಿಕ್ ಬೆಳ್ತಂಗಡಿಯ ಸಂತ ತೆರೆಸಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಸ್ ಡಿಎಂ ಕಾಲೇಜು, ಉಜಿರೆಯಲ್ಲಿ ಪಿಯುಸಿ, ಅನಂತರ ಬೆಂಗಳೂರಿನಲ್ಲಿ ಟೆಲಿಕಮ್ಯುನಿಕೇಶನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಎಂಎಸ್ ಪದವಿಯನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಅಮೆರಿಕದ ಅರಿಝೋನಾ ಸ್ಟೇಟ್ ಯುನಿವರ್ಸಿಟಿ ಯಲ್ಲಿ ಸ್ನಾತಕೋತ್ತರ ಅಧ್ಯಯನ ಮುಗಿಸಿ ಅಲ್ಲಿ ಸ್ವಲ್ಪ ಕಾಲ ಉದ್ಯೋಗದಲ್ಲಿ ಇದ್ದರು.