ನ್ಯೂಸ್ ನಾಟೌಟ್: ಕೊಡಗಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದು ಜನತೆ ಆತಂಕಕ್ಕೀಡಾಗಿದ್ದಾರೆ. ವಯೋವೃದ್ಧರನ್ನೇ ಗುರಿಯಾಗಿಸಿಕೊಂಡು ದರೋಡೆ ನಡೆಸುವ ಕಳ್ಳರ ತಂಡವೊಂದು ಸಕ್ರೀಯವಾಗಿದ್ದು ಕೊಡಗಿನ ಕಡೆ ಹಲವು ಕಡೆ ದರೋಡೆ ನಡೆಸಿವೆ ಎನ್ನಲಾಗುತ್ತಿದೆ. ಒಂದೇ ತಂಡ ಈ ಕೃತ್ಯ ಎಸಗುತ್ತಿದೆಯೋ ಅಥವಾ ಇಂತಹ ಅನೇಕ ತಂಡಗಳಿದೆಯೋ ಅನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.
ವೃದ್ಧರೇ ಟಾರ್ಗೆಟ್
ಮಾಲ್ದಾರೆ ಗ್ರಾಮದ ವೃದ್ಧದಂಪತಿಗಳ ಮನೆಯಲ್ಲಿ ದರೋಡೆಯಾದ ಕೆಲವೇ ದಿನಗಳಲ್ಲಿ ಪಾಲಿಬೆಟ್ಟ ಸಮೀಪದ ಹೊಸೂರು ಗ್ರಾಮದಲ್ಲಿ ಇದೇ ರೀತಿಯ ಪ್ರಕರಣ ನಡೆದಿದೆ. ಕೂತಂಡ ಸುಬ್ಬಯ್ಯ ಹಾಗೂ ಪುಷ್ಪ ದಂಪತಿ ಮನೆಗೆ ಹಾಡ ಹಗಲೇ ನುಗ್ಗಿದ ಚೋರರು ಅಲ್ಮರಾದ ಬೀಗ ಮುರಿದು ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಕದ್ದೊಯ್ದಿದ್ದಾರೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದಂಪತಿ ಪಟ್ಟಣಕ್ಕೆ ತೆರಳಿದ್ದ ಸಂದರ್ಭ ಈ ಕೃತ್ಯ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯುವಕರ ತಂಡವೊಂದು ಅನುಮಾನಸ್ಪದವಾಗಿ ತಿರುಗಾಟ ನಡೆಸುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇವರೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಕಳ್ಳರ ಹೆಡೆಮುರಿ ಕಟ್ಟಲು ಕೊಡಗು ಪೊಲೀಸ್ ಇಲಾಖೆ ವಿಶೇಷ ತಂಡವನ್ನು ರಚಿಸಿದೆ. ತನಿಖೆ ಚುರುಕುಗೊಂಡಿದೆ. ಇದೇ ವೇಳೆ ಪೊನ್ನಂಪೇಟೆ ತಾಲ್ಲೂಕಿನ ಸುಳುಗೋ ಡು ಗ್ರಾಮದಲ್ಲೂ ಕಳ್ಳತನವಾಗಿದ್ದು, ಸುಮಾರು 7.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಕಳ್ಳಿಚಂಡ ಆಶಿಕ್ ಅಪ್ಪಚ್ಚು ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಒಟ್ಟಿನಲ್ಲಿ ಪೊಲೀಸರಿಗೆ ಸರಣಿ ಕಳ್ಳತನವನ್ನು ಭೇದಿಸುವಂತಹ ದೊಡ್ಡ ಜವಾಬ್ದಾರಿ ಹೆಗಲ ಮೇಲೆ ಬಿದ್ದಿದೆ.
ಇತ್ತೀಚಿನ ದಿನಗಳಲ್ಲಿ ಕಾಫಿ ತೋಟಗಳಲ್ಲಿ ಕೆಲಸಕ್ಕೆಂದು ದೂರದ ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇವರ ಗುರುತಿನ ಚೀಟಿಯನ್ನು ಪರಿಶೀಲಿಸದೆ ಕೆಲವರು ಕೆಲಸ ನೀಡುತ್ತಿದ್ದಾರೆ. ಕೆಲವರು ಇದ್ದಕ್ಕಿದ್ದಂತೆ ಕೆಲಸಕ್ಕೆ ಬರುವುದನ್ನು ನಿಲ್ಲಿಸುತ್ತಿದ್ದಾರೆ. ಇವರು ಕೆಲಸಕ್ಕೆ ಬಂದಿದ್ದಾರೋ ಅಥವಾ ಬೇರೆ ಉದ್ದೇಶ ಇಟ್ಟುಕೊಂಡು ಬರುತ್ತಿದ್ದಾರೋ ಅನ್ನುವುದು ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.