ನ್ಯೂಸ್ ನಾಟೌಟ್ : ಕಾಡಾನೆ ಹಾವಳಿಯಿಂದ ಕಂಗೆಟ್ಟಿರುವ ಕೊಡಗಿಗೆ ಇದೀಗ ಹುಲಿಯ ಆತಂಕ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ದನಕರುಗಳನ್ನು ಬಲಿ ಪಡೆಯುತ್ತಿದ್ದ ಹುಲಿಯೊಂದು ಇದೀಗ ವಿರಾಜಪೇಟೆ ನಗರ ಪ್ರದೇಶದ ರಾಜ್ಯ ಹೆದ್ದಾರಿ ಬದಿಯಲ್ಲೇ ಕಾಣಿಸಿಕೊಂಡಿದೆ.
ವಿರಾಜಪೇಟೆ-ಮಡಿಕೇರಿ ಮುಖ್ಯರಸ್ತೆಯಲ್ಲಿರುವ ಕುಕ್ಲೂರು ಮುತ್ತಪ್ಪ ದೇವಸ್ಥಾನದ ಮುಂಭಾಗದಲ್ಲಿ ಹುಲಿ ರಸ್ತೆ ದಾಟುವ ದೃಶ್ಯವನ್ನು ವಾಹನ ಸವಾರರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಹಿನ್ನೆಲೆ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಅರಣ್ಯ ಇಲಾಖೆ ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ಆರ್ಎಫ್ಒ ಶಿವರಾಮ್ ಮತ್ತು ಸಿಬ್ಬಂದಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದೆ. ಕಾರ್ಯಾಚರಣೆ ವೇಳೆ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಪಟ್ಟಣದ ಪೂಮಾಲೆ ಮಂದ್ ಮೂಲಕ ವಿರಾಜಪೇಟೆ-ಮಡಿಕೇರಿ ಮುಖ್ಯರಸ್ತೆ ಬದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಹುಲಿ ಚಲನವಲನ ಪತ್ತೆಗೆ ಇಂದು (ಡಿ.18) ರಾತ್ರಿ ಕ್ಯಾಮೆರಾ ಅಳವಡಿಸಲು ಸಂಕೇತ್ ಪೂವಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Click