ನ್ಯೂಸ್ ನಾಟೌಟ್: ಆಪತ್ತಿನಲ್ಲಿರುವ ಮೂಕ ಪ್ರಾಣಿಗಳ ಪಾಲಿಗೆ ತಾಯಿಯಾಗಿರುವ ಮಂಗಳೂರಿನ ಪ್ರಾಣಿಪ್ರಿಯೆ ರಜನಿ ಶೆಟ್ಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನಾಲ್ಕನೇ ಮಹಡಿಯಲ್ಲಿ ಸಿಲುಕಿಹಾಕಿಕೊಂಡಿದ್ದ ಪರ್ಶಿಯನ್ ಬೆಕ್ಕೊಂದನ್ನು ಹರಸಾಹಸಪಟ್ಟು ರಕ್ಷಿಸಿದ್ದಾರೆ. ರಜನಿ ಶೆಟ್ಟಿಯವರು ಬೆಕ್ಕನ್ನು ರಕ್ಷಿಸುವ ದೃಶ್ಯ ರೋಚಕವಾಗಿದೆ. ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಎಂಪಾಯರ್ ಮಾಲ್ ಹಿಂಭಾಗದ ಅಪಾರ್ಟ್ ಮೆಂಟೊಂದರ ೪ನೇ ಮಹಡಿಯ ಬಾಲ್ಕನಿಯಲ್ಲಿ ಪರ್ಶಿಯನ್ ಬೆಕ್ಕು ಸಿಲುಕಿ ಹಾಕಿಕೊಂಡಿತ್ತು. ಈ ಬೆಕ್ಕು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಹೊರಬರಲಾಗದೇ ಸಿಲುಕಿ ಒದ್ದಾಡುತ್ತಿತ್ತು. ಈ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ಕುಟುಂಬವೊಂದು ಪರ್ಶಿಯನ್ ತಳಿಯ ಬೆಕ್ಕೊಂದನ್ನು ಸಾಕಿತ್ತು. ಆದರೆ ಮನೆಯವರು ನಿತ್ಯವೂ ಮನೆ ಬಾಗಿಲು ಹಾಕಿ ಕೆಲಸಕ್ಕೆ ಹೋಗುವಂತೆ ಶನಿವಾರವೂ ಹೋಗಿದ್ದಾರೆ. ಆದರೆ ಅದೇನಾಯ್ತೋ ಗೊತ್ತಿಲ್ಲ ಬೆಕ್ಕು ಹೊರ ಬಂದು ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಬಾಲ್ಕನಿಗೆ ಬಿದ್ದು ಸಿಕ್ಕಿಹಾಕಿಕೊಂಡಿತ್ತು. ರಾತ್ರಿ ಮನೆಯವರು ಬಂದಾಗಲೇ ಬೆಕ್ಕು ಮನೆಯಲ್ಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ತಮ್ಮ ನೆಚ್ಚಿನ ಬೇಕ್ಕಿಗಾಗಿ ಮನೆಯೆಲ್ಲಾ ಹುಡುಕಾಡುವ ವೇಳೆ ಅದು ಬಾಲ್ಕನಿಯಲ್ಲಿ ಸಿಲುಕಿ ಹಾಕಿಕೊಂಡಿರುವುದು ಗೊತ್ತಾಗಿದೆ.
ತಕ್ಷಣ ಮನೆಯವರು ರಜನಿ ಶೆಟ್ಟಿಯವರನ್ನು ಸಂಪರ್ಕಿಸಿದ್ದಾರೆ. ಮರುದಿನ ಬೆಳಗ್ಗೆ ರಜನಿ ಶೆಟ್ಟಿ ಸ್ಥಳಕ್ಕೆ ಬಂದಿದ್ದಾರೆ. ಆದರೆ ಬಾಲ್ಕನಿಯಲ್ಲಿ ಸಿಲುಕಿಕೊಂಡ ಬೆಕ್ಕನ್ನು ರಕ್ಷಿಸುವುದು ಸುಲಭದ ಮಾತಾಗಿರಲಿಲ್ಲ. ರಜನಿ ಶೆಟ್ಟಿಯವರು ಸೊಂಟಕ್ಕೆ ಹಗ್ಗ ಕಟ್ಟಿ ಏಳನೇ ಮಹಡಿಯಿಂದ ನಾಲ್ಕನೇ ಮಹಡಿಯ ಗ್ಯಾಲರಿಗೆ ಇಳಿದು ಹರಸಾಹಸಪಟ್ಟು ಬೆಕ್ಕನ್ನು ರಕ್ಷಿಸಿದ್ದಾರೆ.