ನ್ಯೂಸ್ ನಾಟೌಟ್: ಅದೆಷ್ಟೋ ರಸ್ತೆಗಳು ಇಂದಿಗೂ ಸರಿಯಾಗದೆ ಶಿಥಿಲಾವಸ್ಥೆಯಲ್ಲಿವೆ. ಸರಿ ಮಾಡಿಸಬೇಕಾಗಿರುವ ರಾಜಕಾರಣಿಗಳು ಮೌನವಾಗಿದ್ದಾರೆ. ಇಂತಹ ರಸ್ತೆಗಳಲ್ಲಿ ಅರಂತೋಡು -ಎಲಿಮಲೆ ಸಂಪರ್ಕದ ರಸ್ತೆಯೂ ಒಂದಾಗಿದೆ. ಈ ರಸ್ತೆಗೆ ಇನ್ನೂ ಕಾಯಕಲ್ಪವಾಗಿಲ್ಲ. ರಸ್ತೆ ಹದಗೆಟ್ಟು ನಿತ್ಯ ಸಾವಿರಾರು ವಾಹನ ಸವಾರರು ಕಷ್ಟಪಡುವಂತಾಗಿದೆ. ಈ ವಿಚಾರದಲ್ಲಿ ಹಲವು ಸಲ ಜನಪ್ರತಿನಿಧಿಗಳನ್ನು ಕೇಳಿದರೂ ಪ್ರಯೋಜನವಾಗಿಲ್ಲ. ಇದೀಗ ರೊಚ್ಚಿಗೆದ್ದ ಅಡ್ತಲೆ ಗ್ರಾಮಸ್ಥರು ಮುಂದಿನ ಮತದಾನವನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಇದರ ಮೊದಲ ಹಂತವಾಗಿ ಬ್ಯಾನರ್ ಅಳವಡಿಸಿ ಪ್ರತಿಭಟನೆ ನಡೆಸಿರುವ ವಿಚಾರ ವೈರಲ್ ಆಗಿದೆ.
ಸುಳ್ಯ ತಾಲೂಕಿನಲ್ಲಿ ಅತೀ ಅಗತ್ಯ ಆಗಲೇಬೇಕಾದ ಕೆಲಸಗಳ ಪಟ್ಟಿಯಲ್ಲಿ ೨ನೇ ಸ್ಥಾನ ಪಡೆದಿರುವ ತಾಲೂಕಿನ ಅತೀ ಹಳೆಯ ಪಿಡಬ್ಲ್ಯೂಡಿ ರಸ್ತೆಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುವ ಅತೀ ಹೆಚ್ಚು ವಾಹನ ಸಾಂದ್ರತೆ ಇರುವ ಕುಕ್ಕೆ ಸುಬ್ರಹ್ಮಣ್ಯವನ್ನು ಅತೀ ಹತ್ತಿರದಿಂದ ಸಂಪರ್ಕಿಸುವ ಮತ್ತು ಕಳೆದ ೨೦ ವರ್ಷಗಳಿಂದ ಮನವಿ ಮಾಡಿದರೂ ಕಡೆಗಣಿಸಿರುವ ಅರಂತೋಡು -ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅರಂತೋಡು ಗ್ರಾಮದ ಅಡ್ತಲೆ ವಾರ್ಡಿನ ಗ್ರಾಮಸ್ಥರಿಂದ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ನಿರ್ಧಾರ ಮಾಡಲಾಗಿದೆ. ನೊಂದ ರಸ್ತೆ ಫಲಾನುಭವಿಗಳು ಎಂದು ಬರೆದ ಬ್ಯಾನರ್ ಅನ್ನು ಅಳವಡಿಸಲಾಗಿದೆ.