ನ್ಯೂಸ್ ನಾಟೌಟ್: ರೈತರು ದೇಶದ ಬೆನ್ನೆಲುಬಾದರೆ, ವಿದ್ಯಾರ್ಥಿಗಳು ದೇಶದ ಭವಿಷ್ಯ. ವಿದ್ಯಾರ್ಥಿಗಳು ಕೃಷಿ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಬೇಕು. ರೈತಾಪಿ ವರ್ಗವನ್ನು ಗೌರವಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಫುಡ್ ಚೈನ್ ಕ್ಯಾಂಪೇನ್ ವತಿಯಿಂದ ಮಂಗಳೂರಿನಲ್ಲಿ ಡಿ.7 ರಂದು ನಡೆದ ವಿದ್ಯಾರ್ಥಿ- ರೈತರ ರ್ಯಾಲಿ ಬಳಿಕ ಪುರಭವನದಲ್ಲಿ ನಡೆದ ‘ಪ್ರಕೃತಿ, ಯುವಜನತೆ ಮತ್ತು ಆರ್ಥಿಕತೆ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಪದ್ಮಶ್ರೀ ಪುರಸ್ಕೃತ ದಾಖಲೆಯ ಭತ್ತ ಬೆಳೆಯ ಸಾಧಕ ಕೃಷಿಕ ಕಾಸರಗೋಡಿನ ಸತ್ಯನಾರಾಯಣ ಬೇಳೇರಿ ಮಾತನಾಡಿ, ಯುವಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯವಿದೆ. ಕೃಷಿ ವಿಷಯ ಶಾಲಾ ಪಠ್ಯದ ಭಾಗವಾಗಬೇಕು. ಕೇರಳದಲ್ಲಿ ಇಂತಹ ಚಿಂತನೆ ಇದೆ. ಕರ್ನಾಟಕದಲ್ಲಿಯೂ ಅದೇ ರೀತಿ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಪದ್ಮಶ್ರೀ ಪುರಸ್ಕೃತ ಸುರಂಗ ನಿರ್ಮಾಣದ ಭಗೀರಥ ಕೃಷಿ ಸಾಧಕ ಅಮೈ ಮಹಾಲಿಂಗ ನಾಯ್ಕ ಮಾತನಾಡಿ, ಸಮತೋಲಿತವಾದ ಪ್ರಕೃತಿಯನ್ನು ಮುಂದಿನ ಪೀಳಿಗೆಯವರಿಗೂ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮೇಯರ್ ಮನೋಜ್ ಕುಮಾರ್, ಪಾಲಿಕೆ ಸದಸ್ಯರಾದ ಮನೋಹರ್ ಶೆಟ್ಟಿ ಕದ್ರಿ, ಭರತ್ ಕುಮಾರ್, ಸಂದೀಪ್ ಗರೋಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ರಮೇಶ್, ರಾಜ್ಯ ರೈತ ಸಂಘದ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಯತೀಶ್ ತುಕಾರಾಂ, ಡಾ. ಸೌರೀಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಅರ್ಚಿತ್ ಜೈನ್ ನಿರೂಪಿಸಿದರು.