ನ್ಯೂಸ್ ನಾಟೌಟ್: ಎರಡು ಸಲ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜ್ಯ ಪ್ರಶಸ್ತಿ ಪಡೆದಿದ್ದ ದಲಿತ ಜನಾಂಗಕ್ಕೆ ಸೇರಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯನ್ನು ಅಮಾನತು ಮಾಡಲಾಗಿದ್ದು ಇದು ಭಾರಿ ಚರ್ಚೆಗೆ ಕಾರಣವಾಗಿದೆ.
ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ಆಗಿರುವ ಪಿ. ವೆಂಕಟೇಶ್ ಅವರನ್ನು ಸೇವೆಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಅಮಾನತುಗೊಳಿಸಿದ್ದಾರೆ. ಈ ಬೆನ್ನಲ್ಲೇ ವೆಂಕಟೇಶ್ ಅವರು ಉತ್ತಮ ಕೆಲಸಗಾರರಾಗಿದ್ದು ತಮ್ಮ ಕೆಲಸದಿಂದಲೇ ಎರಡು ಸಲ ತಮ್ಮ ಕಾರ್ಯಸ್ಥಳದಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂತಹ ಉತ್ತಮ ಅಧಿಕಾರಿಯನ್ನು ಅಮಾನತುಗೊಳಿಸಿರುವುದು ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಬಂಟ್ವಾಳ ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆ ವೆಂಕಟೇಶ್ ಕೆಲಸ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಅವರನ್ನು ಗೋಳಿತೊಟ್ಟಿನಿಂದ ದೂರದ ಹಾಸನ ಗಡಿ ಪ್ರದೇಶವಾಗಿರುವ ಶಿರಾಡಿಗೆ ವರ್ಗಾವಣೆ ಮಾಡಲಾಗಿತ್ತು. ರಾಜಕೀಯ ವ್ಯಕ್ತಿಗಳು ಹೇಳಿದಂತೆ ಸೂತ್ರದ ಬೊಂಬೆಯಂತೆ ನಡೆದುಕೊಳ್ಳಬೇಕು, ಇಲ್ಲದಿದ್ದರೆ ದೂರದ ಊರಿಗೆ ವರ್ಗಾವಣೆ ಅಥವಾ ಅಮಾನತು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಕಡಬದಲ್ಲಿ ನರೇಗಾ ಯೋಜನೆಯನ್ನು ಜಿಲ್ಲೆಯಲ್ಲಿ ಹೆಚ್ಚು ಜನರಿಗೆ ತಲುಪಿಸಿದ ಕೀರ್ತಿಗೆ ನವೀನ್ ಭಾಜನರಾಗಿದ್ದರು. ಅಂತಹ ದಕ್ಷ ಅಧಿಕಾರಿಯನ್ನು ವರ್ಗಾಯಿಸಿರುವುದರ ಹಿಂದೆ ಕೂಡ ರಾಜಕೀಯ ಕಾರಣ ಇದೆ ಎನ್ನಲಾಗುತ್ತಿದೆ. ಈ ಎರಡೂ ಪ್ರಕರಣಗಳ ಹಿಂದೆ ಪ್ರಭಾವಿ ಸಚಿವರೊಬ್ಬರ ಕೈವಾಡ ಕೂಡ ಇದೆ ಎನ್ನಲಾಗುತ್ತಿದೆ.