ನ್ಯೂಸ್ ನಾಟೌಟ್: ಮಹಾರಾಷ್ಟ್ರದ ಚುನಾವಣಾ ಫಲಿತಾಂಶದ ವಿಚಾರವಾಗಿ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪ್ರತಿಪಕ್ಷಗಳ ಆರೋಪದ ನಡುವೆ, ಇವಿಎಂಗಳ ಬಗ್ಗೆ ಹ್ಯಾಕ್ ಮಾಡಬಹುದು ಎಂದು ಆಧಾರ ರಹಿತ ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿದೆ.
ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ನೀಡಿದ ದೂರಿನ ಮೇರೆಗೆ, ಮುಂಬೈ ಸೈಬರ್ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಇವಿಎಂ ಗಳ ಬಗ್ಗೆ ಸುಳ್ಳು ಮಾಹಿತಿ ಹರಡುವ ಯಾರೇ ಆದರೂ ಕಠಿಣ ಕ್ರಿಮಿನಲ್ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಸಿದೆ.
ವಿಡಿಯೋದಲ್ಲಿ ವ್ಯಕ್ತಿ, ಇವಿಎಂಗಳನ್ನು ಹ್ಯಾಕ್ ಮಾಡಬಹುದು. ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆಧಾರರಹಿತ ಆರೋಪ ಮಾಡಿದ್ದಾನೆ ಎನ್ನಲಾಗಿದೆ. ಇದನ್ನು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ 318/4, IT ಕಾಯಿದೆಯ ಸೆಕ್ಷನ್ 43 (g) ಮತ್ತು 66 (d) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇವಿಎಂ ವೈ-ಫೈ, ಬ್ಲೂಟೂತ್ ಹಾಗೂ ಯಾವುದೇ ನೆಟ್ ವರ್ಕ್ಗೆ ಸಂಪರ್ಕಿಸಲಾಗದ ಯಂತ್ರವಾಗಿದೆ. ಆದ್ದರಿಂದ, ಇವಿಎಂಗಳನ್ನು ಮ್ಯಾನಿಪುಲೇಟ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇವಿಎಂಗಳು ಸಂಪೂರ್ಣವಾಗಿ ಟ್ಯಾಂಪರ್-ಪ್ರೂಫ್ ಆಗಿವೆ. ಸುಪ್ರೀಂ ಕೋರ್ಟ್ ಹಲವಾರು ಸಂದರ್ಭಗಳಲ್ಲಿ ಇವಿಎಂಗಳ ಮೇಲಿನ ನಂಬಿಕೆ ಬಗ್ಗೆ ಹೇಳಿದೆ. ಅಲ್ಲದೇ ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಅನುಮಾನಗಳನ್ನು ನಿವಾರಿಸಲು ತನ್ನ ವೆಬ್ ಸೈಟ್ ನಲ್ಲಿ ವಿವರವಾದ ವರದಿಗಳನ್ನು ಪ್ರಕಟಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Click