ನ್ಯೂಸ್ ನಾಟೌಟ್: ಕುಡಿತದ ಚಟಕ್ಕೆ ಬಿದ್ದ ವ್ಯಕ್ತಿಯನ್ನು ಅದರಿಂದ ಹೊರ ತರುವುದಕ್ಕೆ ಮನೆಯವರು ಮದ್ಯವರ್ಜನ ಶಿಬಿರಕ್ಕೆ ಹಾಕಿದ್ದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಹುಂಜ ಕೋಳಿ ಮದ್ಯದ ಚಟಕ್ಕೆ ಸಿಲುಕಿ ಅದರಿಂದ ಹೊರಬರಲಾಗದೆ ಮಾಲೀಕನಿಗೆ ತಲೆ ನೋವಾಗಿ ಪರಿಣಮಿಸಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಪಿಪರಿ ಗ್ರಾಮದಲ್ಲಿ ನಶೆಯ ಗುಂಗಿನಲ್ಲಿರುವ ಈ ವಿಚಿತ್ರ ಹುಂಜವಿದೆ. ಈ ಗ್ರಾಮದಲ್ಲಿ ಭಾವು ಕಟೋರೆ ಎನ್ನುವವರು ಕುಕ್ಕುಟೋದ್ಯಮ ನಡೆಸುತ್ತಿದ್ದಾರೆ. ತಮ್ಮ ಫಾರ್ಮ್ ನಲ್ಲಿ ಬೇರೆ ಬೇರೆ ಜಾತಿಯ ಹಲವು ಕೋಳಿಗಳನ್ನು ಸಾಕುತ್ತಿದ್ದಾರೆ. ಕೋಳಿಗಳನ್ನು ಸಾಕುತ್ತಿರುವ ಫಾರ್ಮ್ ನಲ್ಲಿ ಹುಂಜವೊಂದು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಯಿತು. ಎಲ್ಲಿಂದ ಔಷಧ ತಂದರೂ ಗುಣಮುಖವಾಗಲಿಲ್ಲ. ಕೊನೆಗೆ ವ್ಯಕ್ತಿಯೊಬ್ಬರ ಸಲಹೆ ಮೇರೆಗೆ ಸ್ವಲ್ಪ ಮದ್ಯ ಕುಡಿಸಲಾಯಿತು. ಪ್ರತಿನಿತ್ಯ ಸ್ವಲ್ಪ ಸ್ವಲ್ಪ ಸಾರಾಯಿ ಕೊಡುತ್ತಿದ್ದಂತೆ ಹುಂಜದ ಆರೋಗ್ಯ ಸಹಜ ಸ್ಥಿತಿಗೆ ಬಂದಿತ್ತು. ಹೀಗಾಗಿ ಕೋಳಿ ಸಾಕಿದಾತ ತನಗೆ ಕುಡಿತದ ಅಭ್ಯಾಸವಿಲ್ಲದಿದ್ದರೂ ಹುಂಜನಿಗೆ ಮದ್ಯದಂಗಡಿಯಿಂದ ಸಾರಾಯಿ ತಂದು ಕೊಡುತ್ತಿದ್ದರು. ಇದಾದ ಕೆಲವೇ ದಿನಗಳಲ್ಲಿ ಹುಂಜ ಸಂಪೂರ್ಣ ಚೇತರಿಸಿಕೊಂಡಿತು.
ಹುಂಜ ಚೇತರಿಸಿಕೊಂಡ ಬಳಿಕ ಮಾಲೀಕರು ಮದ್ಯ ಕೊಡುವುದನ್ನು ನಿಲ್ಲಿಸಿದರು. ಆದರೆ ಮದ್ಯದ ರುಚಿಯನ್ನು ಮೈಗೇರಿಸಿಕೊಂಡಿದ್ದ ಹುಂಜ ಅನ್ನ, ನೀರು ಬಿಟ್ಟು ಮೌನ ಪ್ರತಿಭಟನೆಗೆ ಇಳಿಯಿತು. ಹುಂಜದ ಒತ್ತಡದ ಮಣಿದ ಮಾಲೀಕ ಮದ್ಯ ತಂದು ಮತ್ತೆ ನೀಡಲು ಆರಂಭಿಸಿದರು. ತಕ್ಷಣ ರೆಕ್ಕೆ ಬಡಿದು ಹುಂಜ ಕೊಕ್ಕರೆ..ಕೋ..ಕೋ ಎಂದು ಕುಣಿದಾಡಲು ಆರಂಭಿಸಿತು. ಪ್ರತಿ ದಿನ ನೀರಿನ ಬದಲಿಗೆ ಸಾರಾಯಿ ಕುಡಿಯುವ ಈ ಹುಂಜದಿಂದಾಗಿ ಪ್ರತಿ ತಿಂಗಳು ಮಾಲೀಕನಿಗೆ ಎರಡೂವರೇ ಸಾವಿರ ರೂ. ಖರ್ಚಾಗುತ್ತಿದೆ. ಇದು ಮಾಲೀಕನಿಗೆ ತಲೆ ನೋವಾಗಿ ಪರಿಣಮಿಸಿದೆ. ಸದ್ಯ ಈ ಕುಡುಗ ಹುಂಜವನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ.