ನ್ಯೂಸ್ ನಾಟೌಟ್: ಈಗೀಗ ಸಮಾಜದಲ್ಲಿ ಮೋಸ ವಂಚನೆಯೇ ಹೆಚ್ಚು. ನಂಬಿಸಿ ಕತ್ತು ಕೊಯ್ಯುವವರು ಒಂದು ಕಡೆಯಾದರೆ ಮತ್ತೊಂದು ಕಡೆ ಬಡತನದಲ್ಲೇ ಸಿರಿತನ ಕಾಣುವ ಜನರು ಕೂಡ ಇದ್ದಾರೆ. ನಾಲ್ಕು ಜನರಿಗೆ ಉಪಕಾರ ಮಾಡಲಾಗದಿದ್ದರೂ ಪರವಾಗಿಲ್ಲ, ನಂಬಿದವರಿಗೆ ದ್ರೋಹ ಬಗೆಯದೆ ಬದುಕುವುದು ನಿಜವಾದ ಮನುಷ್ಯನ ಗುಣ, ಈ ಮಾತಿನಂತೆ ಬದುಕಿದ ವ್ಯಕ್ತಿಯೆಂದರೆ ಅದು ಸುಳ್ಯದ ಹಿರಿಯಜ್ಜ ವೆಂಕಪ್ಪ ಗೌಡ ನಡುಮನೆಯವರು.
ಇವರದ್ದು ಸುಳ್ಯದ ಮೇಲಿನ ಪೇಟೆಯಲ್ಲೊಂದು ಸಣ್ಣ ಟೀ ಅಂಗಡಿ. ಯಾರೇ ಬರಲಿ ಬಂದವರಿಗೆಲ್ಲ ನಗು ಮೊಗದ ಸತ್ಕಾರ. ನಮ್ಮ ಮನೆಗೆ ನೆಂಟರು ಬಂದರೆ ಹೇಗಿರುತ್ತೆ ಹಾಗೆ ಸಿಗುವ ಸತ್ಕಾರ. ಒಬ್ಬ ಗ್ರಾಹಕನಿಗೆ ಇದಕ್ಕಿಂತ ಹೆಚ್ಚು ಏನು ಬೇಕು ಹೇಳಿ..? ನಮ್ಮ ವೆಂಕಪ್ಪ ಗೌಡರು ಕೂಡ ಹೀಗೆ ಬಾಳಿ ಬದುಕಿದವರು. ಎಲ್ಲರ ಪ್ರೀತಿಯನ್ನು ಗಳಿಸಿದವರು. ಎಲ್ಲರೊಂದಿಗೂ ಸದಾ ನಗುತ್ತಾ ಮಾತನಾಡಿಸುತ್ತಿದ್ದ ಅವರೀಗ ದೇವರ ಪಾದ ಸೇರಿಕೊಂಡಿದ್ದಾರೆ.
ವೆಂಕಪ್ಪ ಗೌಡರು ನ. 27ರಂದು ಅವರು ಇಹಲೋಕ ತ್ಯಜಿಸಿದರು. ಇವರ ಟೀ ಅಂಗಡಿಯಲ್ಲಿ ಹೆಚ್ಚು ಟೀ ಕುಡಿಯುತ್ತಿದ್ದದ್ದು, ಹರಟೆ ಹೊಡೆಯುತ್ತಿದ್ದದ್ದು ಬಡವರು, ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು ಹೀಗೆ ಅನೇಕರು, ಇವರ ಟೀ ಅಂಗಡಿ ಬಡವರ ಪಾಲಿಗೆ ಫೈವ್ ಸ್ಟಾರ್ ಹೋಟೆಲ್ ಇದ್ದ ಹಾಗಿತ್ತು. ಅದರಲ್ಲೂ ವೆಂಕಪ್ಪ ಗೌಡ ನಡುಮನೆ ಹಾಗೂ ಸುಳ್ಯದ ಆಂಬ್ಯುಲೆನ್ಸ್ ಚಾಲಕ -ಮಾಲಕರ ಒಡನಾಟ ಒಂದು ರೀತಿಯಲ್ಲಿ ತಂದೆ ಮಕ್ಕಳ ಸಂಬಂಧದಂತಿತ್ತು. ಹುಸಿ ಕೋಪ, ಆಗಾಗ್ಗೆ ರೇಗಿಸುವುದು ಇದೆಲ್ಲ ಮಾಮೂಲು, ಏನೇ ಇದ್ದರು ಕತ್ತಲಾಗುವಾಗ ‘ಒಂದು ಚಾ ಕೊಡಿ ಅಜ್ಜಪ್ಪ’ ಅಂತ ಆಂಬ್ಯುಲೆನ್ಸ್ ಚಾಲಕ ಮಾಲಕರು ಕೇಳಿದಾಗ ವೆಂಕಪ್ಪ ಗೌಡರು ಟೀ ಜೊತೆಗೆ ಪ್ರೀತಿಯನ್ನೂ ಬೆರೆಸಿ ನಗು ಮೊಗದಿಂದ ಸರ್ವ್ ಮಾಡುತ್ತಿದ್ದರು.
‘ಅಜ್ಜಪ್ಪ’ ಅಂತಾನೇ ಆಂಬ್ಯುಲೆನ್ಸ್ ಚಾಲಕರು ವೆಂಕಪ್ಪ ಗೌಡ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದರು. ಅಂತಹ ವೆಂಕಪ್ಪ ಗೌಡರು ಇನ್ನಿಲ್ಲ ಎನ್ನುವುದನ್ನು ತಿಳಿದ ನಂತರ ಸುಳ್ಯದ ಆಂಬ್ಯುಲೆನ್ಸ್ ಚಾಲಕ ಮಾಲಕರು ಶಾಕ್ ಗೆ ಒಳಗಾದರು. ಪ್ರಗತಿ ಆಂಬ್ಯುಲೆನ್ಸ್ ನ ಅಚ್ಚು, ಶಿವ ಆಂಬ್ಯುಲೆನ್ಸ್ , ಶ್ರೀ ಮುತ್ತಪ್ಪನ್ ಹಾಗೂ ಲೈಫ್ ಕೇರ್ ಆಂಬ್ಯುಲೆನ್ಸ್ ನವರೆಲ್ಲ ಸೇರಿಕೊಂಡು ತಮ್ಮ ಪ್ರೀತಿಯ ‘ಅಜ್ಜಪ್ಪ’ನ ಅಂತಿಮ ಯಾತ್ರೆಯನ್ನು ಸುಳ್ಯ ಪೇಟೆಯಲ್ಲಿಡೀ ಮೆರವಣಿಗೆ ಮೂಲಕ ಮಾಡಿದರು. ಬಳಿಕ ಸುಳ್ಯದ ಕೊಡಿಯಾಲಬೈಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಿದರು.