ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣದಲ್ಲಿ ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳು ಹಾಕಿರುವುದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನು ಹುಡುಕುತ್ತಿರುವುದಾಗಿ ವರದಿ ತಿಳಿಸಿದೆ.
ವರ್ಮಾ ಕೊಯಮತ್ತೂರಿನಲ್ಲಿ ಶೂಟಿಂಗ್ ನಲ್ಲಿದ್ದಾಗ ಅವರ ಹೈದರಾಬಾದ್ ನಿವಾಸಕ್ಕೆ ಪೊಲೀಸ್ ತಂಡ ಭೇಟಿ ನೀಡಿತ್ತು. ಪ್ರಕರಣದ ಬಗ್ಗೆ ವಿಚಾರಣೆಗಾಗಿ ವರ್ಮಾ ಆನ್ ಲೈನ್ ಮೂಲಕ ಪೊಲೀಸರ ಮುಂದೆ ಹಾಜರಾಗಲು ಸಿದ್ಧರಾಗಿದ್ದಾರೆ ಎಂದು ಅವರ ವಕೀಲರು ಹೇಳಿದ್ದು, “ಈ ಡಿಜಿಟಲ್ ಯುಗದಲ್ಲಿ, ಆನ್ ಲೈನ್ ಮುಖಾಂತರವೂ ಪೊಲೀಸರು ವಿಚಾರಣೆ ನಡೆಸಬಹುದು”ಎಂದು ಅವರು ಹೇಳಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರನ ಬಗ್ಗೆ ಅವಹೇಳನಕಾರಿಯಾಗಿ ಎಡಿಟ್ ಮಾಡಿದ ಚಿತ್ರಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ನವೆಂಬರ್ 11 ರಂದು ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ನವೆಂಬರ್ 18 ರಂದು ಪ್ರಕರಣವನ್ನು ರದ್ದುಗೊಳಿಸುವಂತೆ ವರ್ಮಾ ಸಲ್ಲಿಸಿದ್ದ ಮನವಿಯನ್ನು ಆಂಧ್ರ ಹೈಕೋರ್ಟ್ ತಿರಸ್ಕರಿಸಿ, ಜಾಮೀನು ಅರ್ಜಿ ಸಲ್ಲಿಸುವಂತೆ ಕೇಳಿತು. ಜಾಮೀನು ಅರ್ಜಿ ಬಾಕಿ ಇರುವಂತೆಯೇ ನವೆಂಬರ್ 24 ರ ಮೊದಲು ವಿಚಾರಣೆಗಾಗಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಪೊಲೀಸರು ವರ್ಮಾಗೆ ಎರಡನೇ ನೋಟಿಸ್ ಜಾರಿ ಮಾಡಿದ್ದರು. ಈಗ ನಿರ್ದೇಶಕ ಮನೆ ಬಿಟ್ಟು ಹೋಗಿದ್ದು, ಪೊಲೀಸರಿಂದ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
Click