ನ್ಯೂಸ್ ನಾಟೌಟ್: 11 ವರ್ಷದ ಬಾಲಕ ಪೂರಿ ತಿಂದು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಸಿಕಂದರಾಬಾದ್ ನ ಶಾಲೆಯೊಂದರಲ್ಲಿ ನಡೆದಿದೆ.
ಮೃತ ಬಾಲಕನನ್ನು 6ನೇ ತರಗತಿಯ ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.
ಸಿಕಂದರಾಬಾದ್ನ ತಿವೋಲಿ ಥಿಯೇಟರ್ ಬಳಿ ಇರುವ ಶಾಲೆಯಲ್ಲಿ ವಿಕಾಸ್ ಜೈನ್ 6ನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಿಂದ ತಂದ ಪೂರಿಯನ್ನು ಮಧ್ಯಾಹ್ನ ಊಟದ ಸಮಯದಲ್ಲಿ ತಿನ್ನುವಾಗ ಈ ಘಟನೆ ಸಂಭವಿಸಿದೆ.
ಸೋಮವಾರ (ನ.25) ಶಾಲೆಯಲ್ಲಿ ಮಧ್ಯಾಹ್ನ ಊಟದ ವೇಳೆ ಮಕ್ಕಳೊಂದಿಗೆ ಕುಚೇಷ್ಟೆ ಮಾಡಿ ಮೂರು ಪೂರಿ ಒಟ್ಟಿಗೆ ತಿಂದ ಪರಿಣಾಮ ಬಾಲಕನಿಗೆ ಉಸಿರುಗಟ್ಟಿ ನೆಲಕ್ಕೆ ಕುಸಿದಿದ್ದಾನೆ. ಎಷ್ಟೇ ಎಚ್ಚರಗೊಳಿಸಿದರೂ ಪ್ರಜ್ಞೆ ಬಾರದ ಕಾರಣ ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರು ತಪಾಸಣೆ ಮಾಡಿ ಸಾವನ್ನಪ್ಪಿರುವುದಾಗಿ ಧೃಡಪಡಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ಬಾಲಕನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗ ಊಟದ ಸಮಯದಲ್ಲಿ ಒಟ್ಟಿಗೆ ಮೂರು ಪೂರಿ ತಿಂದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಪೊಲೀಸರು ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇಲ್ಲಿಯವರೆಗೂ ಆಂಧ್ರಪ್ರದೇಶದಲ್ಲಿ ಈ ರೀತಿಯ ಮೂರು ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದೋಸೆ ತಿಂದು ಉಸಿರುಗಟ್ಟಿಸಿ ಸಾವನ್ನಪ್ಪಿದ್ದರು. ಮತ್ತೊಂದು ಘಟನೆಯಲ್ಲಿ ಕಳೆದ ಜೂನ್ ನಲ್ಲಿ ಹೈದರಾಬಾದ್ನಲ್ಲಿ 37 ವರ್ಷದ ವ್ಯಕ್ತಿಯೊಬ್ಬರು ಕೋಳಿಯ ಮೂಳೆಯ ತುಂಡು ಗಂಟಲಿಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದರು.
Click