ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಕಲೆ, ಸಂಸ್ಕೃತಿ, ಆಚಾರ-ವಿಚಾರದ ನೆಲೆಬೀಡು. ಈ ಮಣ್ಣಿನಲ್ಲಿ ದೈವ -ದೇವರ ಮೇಲಿನ ನಂಬಿಕೆ ಅಪಾರ. ಇಂತಹ ಪರಮ ಪಾವನ ಪುಣ್ಯ ಭೂಮಿಯಲ್ಲಿ ನೆಲೆ ನಿಂತಿರುವ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿ.
ಈ ದೇವಸ್ಥಾನಕ್ಕೆ ಕಷ್ಟಗಳ ಪರಿಹಾರವನ್ನು ಹೇಳಿಕೊಂಡು ದಿನ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಂತಹ ಭಕ್ತರು ಹರಿಕೆ ಒಪ್ಪಿಸುವುದಕ್ಕೆಂದೇ ಸರ್ಕಾರದಿಂದ ಮಾಡಿರುವ ದೇವಸ್ಥಾನದ ಚಿನ್ನ – ಬೆಳ್ಳಿ ಹರಿಕೆ ಅಂಗಡಿಗೆ ಬರುತ್ತಿದ್ದರು. ಇಲ್ಲಿಂದಲೇ ನಾಗನ ಚಿನ್ನದ ಅಥವಾ ಬೆಳ್ಳಿಯ ಪ್ರತಿರೂಪ ಅಥವಾ ಚಿನ್ನ – ಬೆಳ್ಳಿ ಮೊಟ್ಟೆಗಳನ್ನು ಪಡೆದು ಭಕ್ತರು ದೇವಸ್ಥಾನಕ್ಕೆ ಹರಿಕೆ ರೂಪದಲ್ಲಿ ಸಲ್ಲಿಸುತ್ತಿದ್ದರು. ಒಳ್ಳೆಯ ಆದಾಯದಲ್ಲೇ ಇದ್ದ ಈ ದೇವಸ್ಥಾನದ ಚಿನ್ನ-ಬೆಳ್ಳಿ ಹರಿಕೆ ಅಂಗಡಿ ಕಳೆದ ಕೆಲವು ತಿಂಗಳಿನಿಂದ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿದೆ. ಇದಕ್ಕೆ ಅಸಲಿ ಕಾರಣ ಏನು ಅನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ.
ಒಂದಷ್ಟು ಜನರು ಇದೀಗ ಬಾಗಿಲು ಮುಚ್ಚಿರುವುದರ ಹಿಂದಿನ ಅಸಲಿ ಕಥೆಗಳು ಬೇರೆಯೇ ಇದೆ ಅನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಖಾಸಗಿಯವರಿಗೆ ಲಾಭ ಮಾಡಿಕೊಡುವುದಕ್ಕೆಂದೇ ಇದರ ಬಾಗಿಲು ಉದ್ದೇಶಪೂರ್ವಕವಾಗಿ ಮುಚ್ಚಲಾಗಿದೆ ಅನ್ನುವ ಟೀಕೆಗಳು ಕೇಳಿ ಬರುತ್ತಿವೆ. ಹೀಗಾಗಿ ಮುಚ್ಚಿದ ಬಾಗಿಲಿನ ಹಿಂದಿನ ಅಸಲಿ ಕಾರಣ ಏನು ಅನ್ನುವುದನ್ನು ಜನರ ಎದುರು ಇದರ ಹೊಣೆ ಹೊತ್ತವರೇ ಬಹಿರಂಗಪಡಿಸಬೇಕಿದೆ. ಈ ವಿಚಾರದ ಸತ್ಯ ಹೊರಗೆ ಬರದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಮಾನದ ಕಿಡಿ ಬೆಂಕಿಯಾಗಿ ಹೊತ್ತಿಕೊಂಡು ಉರಿಯುವ ಸಾಧ್ಯತೆಗಳು ದಟ್ಟವಾಗಿವೆ.