ನ್ಯೂಸ್ ನಾಟೌಟ್: ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಇತ್ತೀಚೆಗೆ ನಡೆದ ‘ಪಟ್ಲ ಸಂಭ್ರಮ’ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕಲ್ಲುಗುಂಡಿಯ ಕೊರಗಪ್ಪ ಮಣಿಯಾಣಿಯವರಿಗೆ ಯಕ್ಷ ಧ್ರುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾಗಿದ್ದಾರೆ. ಮಾದೇಪಾಲ್ ರಾಮಣ್ಣರೈಗಳಿಂದ ನೃತ್ಯ ಕಲಿತು, ಚೌಡೇಶ್ವರಿ, ಶಾಸ್ತಾವೇಶ್ವರ ಹಾಗೂ ಮಲ್ಲಿಕಾರ್ಜುನ ಮೇಳಗಳಲ್ಲಿ ಕಲಾವಿದರಾಗಿ ದುಡಿದಿದ್ದಾರೆ. ಹವ್ಯಾಸಿ ಕಲಾವಿದರಾಗಿ ಸುಮಾರು ೪೦ ವರ್ಷಗಳಿಗೂ ಹೆಚ್ಚು ಕಾಲ ಕಲಾಮಾತೆಯ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಅರ್ಜುನ, ಕರ್ಣ, ವಾಲಿ, ಧರ್ಮರಾಯ, ಭೀಮ, ಅತಿಕಾಯ, ಬಲರಾಮ ವೇಷಗಳಲ್ಲಿ ಗಟ್ಟಿ ಹಿಡಿತವಿದ್ದ ಇವರು ಅಜಮುಖಿ,ಪೂತನಿ, ಶೂರ್ಪನಖಿ, ಪುತ್ರಜ್ವಾಲೆ, ಮೇಘಸ್ತನಿ ಮುಂತಾದ ಸ್ತ್ರೀ ಪಾತ್ರಗಳ ವೇಷ ಧರಿಸಿ ತಾಳಮದ್ದಳೆಯಲ್ಲಿ ಸೌಮ್ಯ ಪಾತ್ರಗಳಲ್ಲಿ ಅರ್ಥ ಹೇಳುವುದರಲ್ಲೂ ಪರಿಣಿತರಾಗಿದ್ದಾರೆ.