ನ್ಯೂಸ್ ನಾಟೌಟ್: ಹಿಟ್ ಆ್ಯಂಡ್ ರನ್ ನಡೆಸಿ ಆಟೋ ಚಾಲಕನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಕಾಪು ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪುವಿನ ಮಿಲಿಟರಿ ಕಾಲನಿಯಲ್ಲಿ ನ.11 ರಂದು ಮುಂಜಾನೆ ಆಟೋ ಚಾಲಕ ಮಹಮ್ಮದ್ ಹುಸೇನ್ ಎಂಬವರು ತನ್ನ ದ್ವಿಚಕ್ರ ವಾಹನದಲ್ಲಿ ಪುಂಚಲ್ಕಾಡುವಿನಿಂದ ಬೆಳಪುಗೆ ತೆರಳುತ್ತಿದ್ದರು. ಈ ವೇಳೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ವಾಹನ ಚಾಲಕ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಹುಸೇನ್ ಅವರ ಕಾಲು, ಕೈ, ತಲೆಗೆ ತೀವ್ರ ಗಾಯಗಳಾಗಿವೆ. ಮೊದಲಿಗೆ ಅವರನ್ನು ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಈ ನಡುವೆ ಅಪಘಾತಕ್ಕೊಳಗಾದ ಗಾಯಾಳುವಿಗೆ ಸಹಾಯ ಮಾಡದೆ ಜತೆಗೆ ಪೊಲೀಸರಿಗೆ ಘಟನೆಯ ಬಗ್ಗೆ ವರದಿ ಮಾಡದೆ ಪ್ರಜ್ವಲ್ ಶೆಟ್ಟಿ ಸ್ಥಳದಿಂದ ಪರಾರಿಯಾಗಿದ್ದ. ಅಪಘಾತದ ಭೀಕರತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಶೆಟ್ಟಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ.