ನ್ಯೂಸ್ ನಾಟೌಟ್: ಮೇಸ್ತ್ರಿ ಜತೆ ಸಹಾಯಕರಾಗಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೋರ್ವ ಕೆಲಸ ವೇಳೆ ಮೃತಪಟ್ಟಿದ್ದು, ಬಳಿಕ ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಮನೆ ಸಮೀಪದ ರಸ್ತೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಪುತ್ತೂರು ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಎಂಬಲ್ಲಿ ಶನಿವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಶಿವಪ್ಪ (70) ಎಂದು ಗುರುತಿಸಲಾಗಿದೆ. ಬೆಳಗ್ಗೆ ಸಾರಣೆ ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಇತರ ಕಾರ್ಮಿಕರೊಂದಿಗೆ ಶಿವಪ್ಪ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಕೆಲಸ ಮುಗಿದ ಬಳಿಕ ಪಿಕಪ್ ವಾಹನದಲ್ಲಿ ತಂದು ಮನೆಯ ಸಮೀಪದ ರಸ್ತೆಯಲ್ಲಿ ಶವ ಇಟ್ಟು ಹೋಗಿದ್ದಾರೆ. ನಾವು ನೋಡುವಾಗ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಶಿವಪ್ಪ ಅವರ ಸಂಬಂಧಿಕರು ಆರೋಪಿಸಿದ್ದಾರೆ. ಒಂದು ವೇಳೆ ಕೆಲಸ ವೇಳೆ ಅನಾರೋಗ್ಯಕ್ಕೊಳಗಾಗಿದ್ದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕಾಗಿತ್ತು. ಮೃತಪಟ್ಟಿದ್ದರೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು. ಈ ರೀತಿ ಮಾಡಿರುವುದು ಎಷ್ಟು ಸರಿ’ ಎಂದು ಶಿವಪ್ಪ ಅವರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಮತ್ತಿತರರು ಭೇಟಿ ನೀಡಿದ್ದಾರೆ.
ಶಿವಪ್ಪ ಅವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.