ನ್ಯೂಸ್ ನಾಟೌಟ್ : ಕೆ.ಜಿ.ಎಫ್–೨ ಸಿನಿಮಾವನ್ನು ಮೂರು ಭಾರಿ ನೋಡಿ, ನಾಯಕ ನಟ ‘ರಾಕಿ ಬಾಯ್‘ ಅವರಿಂದ ಪ್ರಭಾವಿತನಾಗಿ ಬಾಲಕನೊಬ್ಬ ಒಂದು ಪ್ಯಾಕ್ ಸಿಗರೇಟ್ ಸೇದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಯಶಸ್ವಿ ಚಿಕಿತ್ಸೆ ಬಳಿಕ ಬಾಲಕ ಚೇತರಿಸಿಕೊಂಡಿದ್ದಾನೆ ಎಂದು ಪೋಷಕರು ಹೇಳಿದ್ದಾರೆ. ಸಿನಿಮಾದಲ್ಲಿ ನಾಯಕನ ಪ್ರಭಾವದಿಂದಾಗಿ ಬಾಲಕ ಸಿಗರೇಟ್ ಸೇದಿದ್ದಾನೆ. ನಂತರ ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಾಲಕನಿಗೆ ಸೂಕ್ತ ಚಿಕಿತ್ಸೆ ಹಾಗೂ ಆಪ್ತ ಸಮಾಲೋಜನೆ ನೀಡಲಾಗಿದ್ದು ಬಾಲಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ವಾಸಕೋಶ ತಜ್ಞ ಡಾ.ರೋಹಿತ್ ರೆಡ್ಡಿ ಪಥೂರಿ, ಸಿನಿಮಾಗಳು ನಮ್ಮ ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಸಿಗರೇಟು ಸೇದುವುದು, ತಂಬಾಕು ಜಗಿಯುವುದು, ಮದ್ಯಪಾನದಂತಹ ದೃಶ್ಯಗಳನ್ನು ವೈಭವೀಕರಿಸಬಾರದು. ಆದ್ದರಿಂದ ಸಿನಿಮಾ ನಟರು, ಚಿತ್ರ ನಿರ್ಮಾಪಕರು ಇಂತಹ ವಿಚಾರಗಳಲ್ಲಿ ಎಚ್ಚರಿಕೆವಹಿಸಬೇಕು ಎಂದು ಹೇಳಿದ್ದಾರೆ. ಈ ಘಟನೆಯಲ್ಲಿ ಬಾಲಕ ‘ರಾಕಿ ಭಾಯ್’ ಪಾತ್ರದಿಂದ ಸುಲಭವಾಗಿ ಪ್ರಭಾವಿತನಾಗಿ ಸಿಗರೇಟ್ ಸೇದಿ ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಡಾ.ರೋಹಿತ್ ರೆಡ್ಡಿ ಮಾಹಿತಿ ನೀಡಿದ್ದಾರೆ.