ನ್ಯೂಸ್ ನಾಟೌಟ್: ಬಾಲಕಿಯೊಬ್ಬಳು ಹಾವು ಕಚ್ಚಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿ ಅಂತ್ಯಕ್ರಿಯೆ ನಡೆಸಿದ ಪೋಷಕರಿಗೆ ಆರು ತಿಂಗಳ ಬಳಿಕ ಭಯಾನಕ ವಿಚಾರ ಹೊರಬಿದ್ದಿದೆ. ಇದೀಗ 6 ತಿಂಗಳ ಹಿಂದೆ ಗೋರಿಯಲ್ಲಿ ಹೂತಿದ್ದ ಬಾಲಕಿ ಶವವನ್ನು ಹೊರ ತೆಗೆದು ಮರು ಶವಪರೀಕ್ಷೆ ನಡೆಸಲಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಕಳೆದ ಮೇ 12 ರಂದು ಸಾಪ್ರೀನ್ ವಂಟಿ ಎನ್ನುವ 10 ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಕುಟುಂಬಸ್ಥರು ತಮ್ಮದೆ ಜಮೀನಿನಲ್ಲಿ ಶವವನ್ನು ಹೂತು ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ ಎರಡು ತಿಂಗಳ ಬಳಿಕ ಜುಲೈ 7 ರಂದು ಬಾಲಕಿಯ ತಾಯಿ ಶಾಬಾನಾಗೆ ಸಹೋದರ ಸಂಬಂಧಿಗಳಿಂದ ಒತ್ತಾಯಪೂರ್ವಕವಾಗಿ ವಿಷ ಉಣಿಸಲು ಯತ್ನ ನಡೆದಿತ್ತು. ಈ ವೇಳೆ ವಿಷ ಹಾಕುತ್ತಿದ್ದ ಸಹೋದರ ಸಂಬಂಧಿಕ ಮಹಮ್ಮದ್ ವಂಟಿ ಹಾಗೂ ಆತನ ತಾಯಿ ರಜಾಕ್ಮಾ ನಿನ್ನ ಮಗಳಿಗೆ ಕರೆಂಟ್ ಕೊಟ್ಟು ಸಾಯಿಸಿದ್ದೇವೆ. ಅಂದೆ ನಿನ್ನನ್ನು ಕೊಲ್ಲುತ್ತಿದ್ದೇವು, ಆಗಲಿಲ್ಲ ಈಗ ಸಮಯ ಸಿಕ್ಕಿದೆ ಎಂದು ಹೇಳುತ್ತಲೆ ಬಾಟಲಿಯಲ್ಲಿದ್ದ ವಿಷ ಉಣಿಸಿದ್ದಾರೆ. ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಆದ್ರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಶಾಬಾನಾ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ವೇಳೆ ಮಗಳು ಸತ್ತಿದ್ದು ಹಾವು ಕಚ್ಚಿದ್ದರಿಂದಲ್ಲ ಬದಲಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ ಎನ್ನುವ ವಿಚಾರವನ್ನ ಶಾಬಾನಾ ಬಾಯ್ಬಿಟ್ಟಿದ್ದಳು. ಶಾಬಾನ ವಿಷ ಪ್ರಾಶನವಾದ ಸಮಯ ಮಾತನಾಡಿದ ವಿಡಿಯೋ ದೃಶ್ಯಗಳನ್ನು ಪತಿ ಸಲೀಂ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ.
ಬಾಲಕಿ ಸಾಪ್ರೀನ್ ಸಾವು ಅಸಹಜ ಎನ್ನವ ವಿಚಾರವಾಗಿ ಸಂಬಂಧಿಕರ ವಿರುದ್ಧ ಚಡಚಣ ಠಾಣೆಗೆ ದೂರು ನೀಡಲು ತಂದೆ ಸಲೀಂ ತಾಯಿ ಶಾಬಾನಾ ಹೋಗಿದ್ದರೂ ಪೊಲೀಸರು ದೂರು ಸ್ವೀಕರಿಸದೆ ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಸಲೀಂ ದೂರಿದ್ದಾರೆ. ಬಳಿಕ ಮಗಳ ಸಾವಿನ ಬಗ್ಗೆ ಇದ್ದ ಅನುಮಾನ ಹಾಗೂ ಪತ್ನಿಯ ಹತ್ಯೆಗೆ ನಡೆದ ಯತ್ನ ಬಗ್ಗೆ ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರ್ದೇಶಕರು ಸಾಪ್ರೀನ್ ಶವ ಪರೀಕ್ಷೆಗೆ ಆದೇಶ ನೀಡಿದ್ದರು. ಇದೀಗ ಮತ್ತೆ ಬಾಲಕಿಯ ಶವವನ್ನು ಹೊರ ತೆಗೆದು ಶವಪರೀಕ್ಷೆ ಪಡೆಸಲಾಗಿದೆ. ವಿಜಯಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಹಬೀದ್ ಗದ್ಯಾಳ ನೇತೃತ್ವದಲ್ಲಿ ಬಾಲಕಿಯ ಶವ ಪರೀಕ್ಷೆ ನಡೆಸಲಾಗಿತ್ತು ವರದಿ ಬಂದ ಬಳಿಕ ನಿಜ ವಿಚಾರ ಬಯಲಾಗಲಿದೆ.