ನ್ಯೂಸ್ ನಾಟೌಟ್: ವಿವಾಹ ಸಮಾರಂಭದಲ್ಲಿ ವಧುವಿಗೆ ವರನ ಕಡೆಯವರು ನೀಡಿದ್ದ ಚಿನ್ನವನ್ನು ಖದೀಮರು ಎಗರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಗ್ರಾಮದಲ್ಲಿರುವ ದಿ ರಾಯಲ್ ಶಾಲಿಮಾರ್ ಹಾಲ್ ನಲ್ಲಿ ಬುಧವಾರ ನಡೆದಿದೆ.
ಶಾಲಿಮಾರ್ ಹಾಲ್ ನಲ್ಲಿ ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿ ಗ್ರಾಮದ ವಧು ಮತ್ತು ಹ್ಯಾರಗುಡ್ಡೆ ಗ್ರಾಮದ ವರನ ವಿವಾಹ ಕಾರ್ಯಕ್ರಮ ಏರ್ಪಾಡಾಗಿತ್ತು. ಈ ವೇಳೆ ವರನ ಕಡೆಯವರು ವಧುವಿಗೆ ನೀಡಿದ್ದ ಅಂದಾಜು ಮೂರು ಲಕ್ಷ ಮೌಲ್ಯದ ಚಿನ್ನ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಮದುವೆ ವೇಳೆ ವರನ ಕಡೆಯವರು ನೀಡಿದ್ದ ಚಿನ್ನದಲ್ಲಿ ನೆಕ್ಲೆಸ್ ಮತ್ತು ಓಲೆಗಳನ್ನು ವಧುವಿನ ಕೊಠಡಿಯಲ್ಲಿ ಇರಿಸಿ ರೂಮಿನ ಲಾಕ್ ಮಾಡಿ ಎಲ್ಲರು ಮುಹೂರ್ತ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ವಧುವಿನ ಕೊಠಡಿಯ ಕಿಟಕಿ(ಸ್ಲೈಡಿಂಗ್ ಗ್ಲಾಸ್ ಕಿಟಕಿ)ಯಿಂದ ಒಳಬಂದಿರುವ ಕಳ್ಳರು ರೂಮನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಚಿನ್ನವನ್ನು ಎಗರಿಸಿ ಕಿಟಕಿಯಿಂದಲೇ ಪರಾರಿಯಾಗಿದ್ದಾರೆ. ಮುಹೂರ್ತದ ವೇಳೆ ವಧುವಿನ ಕಡೆಯವರು ಕೊಠಡಿಗೆ ಹೋಗಲು ಮುಂದಾದಾಗ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಇದರಿಂದ ವಿವಾಹ ಸಂದರ್ಭದಲ್ಲಿ ತೀವ್ರ ಗೊಂದಲ ಉಂಟಾಗಿದೆ. ತಕ್ಷಣ ಕಟ್ಟಡ ಮಾಲೀಕರಿಗೆ ವಿಷಯ ಮುಟ್ಟಿಸಿದ್ದು, ಮಾಲೀಕರು ಮತ್ತು ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಳ್ಳರು ಕಿಟಕಿ ಮೂಲಕ ಒಳಬಂದಿರುವುದು ಬೆಳಕಿಗೆ ಬಂದಿದೆ. ಶಾಲಿಮಾರ್ ಹಾಲ್ ಪಕ್ಕದಲ್ಲಿ ಕಟ್ಟಡವೊಂದನ್ನು ಕಟ್ಟುತ್ತಿದ್ದು, ಅದರ ಮೇಲಿನಿಂದ ಹತ್ತಿ ಖದೀಮರು ವಧುವಿನ ಕೊಠಡಿ ಕಿಟಕಿ ಮೂಲಕ ಒಳನುಸುಳಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.