ನ್ಯೂಸ್ ನಾಟೌಟ್: ವ್ಯಕ್ತಿಯೋರ್ವ ತಹಶೀಲ್ದಾರ್ ಕಚೇರಿಗೆ ನುಗ್ಗಿ ಏಕಾಏಕಿ ಉಪ ತಹಶೀಲ್ದಾರ್ ಮೇಲೆ ಕಬ್ಬಿಣದ ರಾಡ್ ನಿಂದ ದಾಳಿ ಮಾಡಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ, ಇಂದು(ನ.13) ಆತನನ್ನು ಬಂಧಿಸಲಾಗಿದೆ.
ಕೊಪ್ಪಳ ನಗರದ ಉಪ ತಹಶೀಲ್ದಾರ್ ರೇಖಾ ದೀಕ್ಷಿತ್ ಎನ್ನುವವರ ಮೇಲೆ ವ್ಯಕ್ತಿಯೋರ್ವ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಪ್ರಭು ಚೆನ್ನದಾಸರ್ ಎಂಬಾತ ದಾಳಿ ಮಾಡಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಉಪತಹಶೀಲ್ದಾರ್ ರೇಖಾ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಭು ಚೆನ್ನದಾಸರ್ ರೇಖಾಳ ಅತ್ಯಾಪ್ತ ಎನ್ನಲಾಗಿದೆ. ನಿನ್ನೆ (ನವೆಂಬರ್ 12) ಸಂಜೆ 5 ಗಂಟೆ ಸುಮಾರಿಗೆ ಕಚೇರಿಯಲ್ಲಿ ರೇಖಾ ಕೆಲಸ ಮಾಡುತ್ತಿದ್ದ ವೇಳೆ, ಈತ ಕಬ್ಬಿಣದ ರಾಡ್ ಹಿಡಿದು ಕಚೇರಿಗೆ ನುಗ್ಗಿ ಏಕಾಏಕಿ ರೇಖಾ ಮೇಲೆ ದಾಳಿ ಮಾಡಿದ್ದು, ರಾಡ್ ನಿಂದ ರೇಖಾಳ ತಲೆಗೆ 3 ಬಾರಿ ಹೊಡೆದಿದ್ದಾನೆ. ರೇಖಾ ಕುಸಿದು ಬಿದ್ದರೂ ಸಹ ಥಳಿಸಿದ್ದಾನೆ. ಕೂಡಲೇ ಕಚೇರಿ ಸಿಬ್ಬಂದಿ ರೇಖಾರನ್ನ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಇನ್ನು ಹಲ್ಲೆ ಮಾಡಿದ ಪ್ರಭು ಮೂರು ವರ್ಷದಿಂದ ರೇಖಾಗೆ ಪರಿಚಯಸ್ಥ. ಪ್ರತಿದಿನ ಈತನೇ ರೇಖಾಳನ್ನ ಕಚೇರಿಗೆ ಕರೆದುಕೊಂಡು ಬರುವುದು, ಕಚೇರಿಯಿಂದ ಕರೆದೊಯ್ಯುವುದು ಮಾಡುತ್ತಿದ್ದ. ಇನ್ನು ರೇಖಾ ಈತನಿಗೆ ಹಣಕಾಸಿನ ನೆರವನ್ನೂ ನೀಡಿದ್ದರು ಎನ್ನಲಾಗಿದೆ. ದಾಳಿಯ ನಿಖರ ಕಾರಣ ತನಿಖೆಯ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ. ಆರೋಪಿ ಪ್ರಭುನನ್ನು ಕೊಪ್ಪಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Click