ನ್ಯೂಸ್ ನಾಟೌಟ್: ಕಸ್ತೂರಿ ರಂಗನ್ ವರದಿ ಜಾರಿಯ ಬಗ್ಗೆ ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಸುಬ್ರಹ್ಮಣ್ಯ, ಗುಂಡ್ಯ, ಕಡಬ, ಕೊಕ್ಕಡ ಸೇರಿದಂತೆ ಹಲವು ಕಡೆ ನಕ್ಸಲರ ಹೆಜ್ಜೆ ಸದ್ದು ಕೇಳಿಸುತ್ತಿದೆ. ಈ ಅನುಮಾನದ ಮೇರೆಗೆ ಪೊಲೀಸ್ ಟೀಂ ಕೊಂಬಿಂಗ್ ನಡೆಸಲು ತಯಾರಿ ನಡೆಸಿದೆ. ಕಾಡಿನಾದ್ಯಂತ ಪ್ರತಿ ನಿತ್ಯ 10 ಕಿ.ಮೀ. ವ್ಯಾಪ್ತಿಯಲ್ಲಿ ಕೊಂಬಿಂಗ್ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಕೆಲವು ತಿಂಗಳ ಹಿಂದೆ ಕಲ್ಮಕಾರಿನ ರಬ್ಬರ್ ಎಸ್ಟೇಟ್ ಸಮೀಪಕ್ಕೆ ಬಂದಿದ್ದ ನಕ್ಸಲರು ಅಂಗಡಿಯೊಂದರಿಂದ ಬಂದು ದಿನಸಿ ತೆಗೆದುಕೊಂಡು ಹೋಗಿದ್ದರು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಇದಾದ ಬಳಿಕ ನಕ್ಸಲರು ತಮ್ಮ ದಿಕ್ಕು ಬದಲಾಯಿಸಿ ಪ್ರಯಾಣಿಸುತ್ತಿದ್ದಾರೆ. ಮಾತ್ರವಲ್ಲ ಕಾಡಿನಲ್ಲಿದ್ದುಕೊಂಡೇ ನಾಡಿನಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ ಅನ್ನುವ ವಿಚಾರ ಬೆಚ್ಚಿ ಬೀಳಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದರು. ಈ ವೇಳೆ ಧರ್ಮಸ್ಥಳದಲ್ಲಿ ಇಬ್ಬರು ನಕ್ಸಲರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದರು, ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಾಡಿನಲ್ಲಿದ್ದ ನಕ್ಸಲರನ್ನು ಹಿಡಿಯುವುದಕ್ಕೆ ತಯಾರಿ ನಡೆದಿತ್ತು. ಕೊನೆಯ ಹಂತದಲ್ಲಿ ಎಲ್ಲವು ಮಿಸ್ ಆಗಿತ್ತೂ ಎಂದೂ ಹೇಳಲಾಗಿದೆ. ಸದ್ಯ ಸಂಚಾರದಲ್ಲಿರುವ ನಕ್ಸಲರು ಯಾವುದೇ ಆಧುನಿಕ ಉಪಕರಣಗಳನ್ನು ಹೊಂದಿಲ್ಲ. ಕೇವಲ ಪತ್ರ ಮೂಲಕ ಹೊರಗಿನ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.