ನ್ಯೂಸ್ ನಾಟೌಟ್: ವಿಮಾನಯಾನ ಸಂಸ್ಥೆ ವಿಸ್ತಾರ, ಏರ್ ಇಂಡಿಯಾ ಜೊತೆ ವಿಲೀನಗೊಳ್ಳುವ ಹಿನ್ನೆಲೆ ಸೋಮವಾರ(ನ.11) ತನ್ನ ಕೊನೆಯ ವಿಮಾನಗಳನ್ನು ಹಾರಾಟ ನಡೆಸಿದೆ.
ವಿಸ್ತಾರಾ – ಟಾಟಾ ಎಸ್ಐಎ ಏರ್ಲೈನ್ಸ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಕಣ್ಣನ್ ಲಿಂಕ್ಡ್ ಇನ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ವಿಸ್ತಾರಾ, TATA SIA ಏರ್ಲೈನ್ಸ್ ಲಿಮಿಟೆಡ್ ಹಿಂದಿನ ಮತ್ತು ಪ್ರಸ್ತುತ ತಂಡಕ್ಕೆ ಧನ್ಯವಾದಗಳು. ಅಭೂತಪೂರ್ವ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ 75 ಮಿಲಿಯನ್ ಪ್ರಯಾಣಿಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಈ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.
ನಾಳೆಯಿಂದ ವಿಸ್ತಾರಾ ಟಿಕೆಟ್ ಬುಕ್ ಮಾಡಿರುವ 1,15,000 ಕ್ಕೂ ಹೆಚ್ಚು ಪ್ರಯಾಣಿಕರು ಏರ್ ಇಂಡಿಯಾ ಹೆಸರಿನ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ವಿಮಾನದ ಹೆಸರು ಬದಲಾದರೂ, ಒಟ್ಟಾರೆ ಸೇವೆಯಲ್ಲಿ ಹೆಚ್ಚಾಗಿ ಬದಲಾಗುವುದಿಲ್ಲ ಎಂದು ಹೇಳಲಾಗಿದೆ.
ನ.12ರಿಂದ ವಿಸ್ತಾರ ವಿಮಾನಗಳನ್ನು ಏರ್ ಇಂಡಿಯಾ ನಿರ್ವಹಿಸಲಿದೆ ಮತ್ತು ವಿಸ್ತಾರದ ಮಾರ್ಗಗಳಲ್ಲಿ ಬುಕಿಂಗ್ಗಳನ್ನು ಏರ್ ಇಂಡಿಯಾದ ವೆಬ್ಸೈಟ್ ಗೆ ಮರುನಿರ್ದೇಶಿಸಲಾಗುವುದು ಎನ್ನಲಾಗಿದೆ. ವಿಸ್ತಾರಾ ನ.11ರವರೆಗೆ ಎಂದಿನಂತೆ ಬುಕಿಂಗ್ ಗಳ ಸ್ವೀಕಾರ ಮತ್ತು ವಿಮಾನಯಾನಗಳ ನಿರ್ವಹಣೆಯನ್ನು ಮುಂದುವರಿಸಲಿದೆ ಎಂದು ಈ ಮೊದಲು ಹೇಳಲಾಗಿತ್ತು.