ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ವಿಪರೀತ ಹೆಚ್ಚುತ್ತಿದೆ. ಮಾನವ ಹಾಗೂ ವನ್ಯ ಮೃಗಗಳ ನಡುವಿನ ಕದನ ಮುಂದುವರಿದಿದೆ. ಕೊಡಗು ಸಂಪಾಜೆಯ ಭಾಗದಲ್ಲೂ ಆನೆಗಳು ಕೃಷಿಕರಿಗೆ ವಿಪರೀತ ಉಪಟಳ ನೀಡುತ್ತಿದೆ. ಈ ಬೆನ್ನಲ್ಲೇ ದೇವಸ್ಥಾನದ ಜೀರ್ಣೋದ್ದಾರ ಕೆಲಸಕ್ಕೆಂದು ಬಂದ ಅರ್ಚಕರ ಸ್ಕೂಟಿಯನ್ನು ಕಾಡಾನೆಯೊಂದು ತುಳಿದು ನಜ್ಜುಗುಜ್ಜು ಮಾಡಿಬಿಟ್ಟಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಅರೆಕಲ್ಲು ಬಳಿ. ಶನಿವಾರ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಕೊಡಗು ಸಂಪಾಜೆಯ ಅರೆಕಲ್ಲಿನಲ್ಲಿ ದೇವಸ್ಥಾನವೊಂದರ ಕಾರ್ಯಕ್ಕಾಗಿ ಕೊಡಗು ಗಾಳಿಬೀಡು ಮೂಲದ ಅರ್ಚಕ ಶಿವಪ್ಪ ಅನ್ನುವವರು ಬಂದಿದ್ದರು. ಹಾಗೆ ಬಂದವರು ದೇವಸ್ಥಾನ ಸಮೀಪ ಸ್ಕೂಟಿ ಪಾರ್ಕ್ ಮಾಡಿದ್ದರು. ರಾತ್ರಿ ಪಕ್ಕದಲ್ಲೇ ಇದ್ದ ಕೊಠಡಿಯೊಂದರಲ್ಲಿ ನಿದ್ರೆ ಮಾಡಿದ್ದರು. ಸುಮಾರು ರಾತ್ರಿ 12 ಗಂಟೆ ವೇಳೆ ಹೊರಗೆ ಜೋರಾದ ಶಬ್ದ ಕೇಳಿ ಬಂದಿದೆ. ಆಗ ಇವರ ಸ್ಕೂಟಿ ಮೇಲೆ ಆನೆಯೊಂದು ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ಆದರೆ ಅವರು ಹೊರಗೆ ಹೋಗಿ ಅದನ್ನು ತಡೆಯುವುದಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.