ನ್ಯೂಸ್ ನಾಟೌಟ್: ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ (ನ.8 ) ಪ್ರಥಮ ವರ್ಷದ ಬಿ.ಎ.ಎಂ.ಎಸ್ ವಿದ್ಯಾರ್ಥಿಗಳ ಒರಿಯಂಟೇಶನ್ ಕಾರ್ಯಕ್ರಮ ಮತ್ತು ಏಪ್ರನ್ ವಿತರಣಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಿ ವಿದ್ಯಾಭ್ಯಾಸದ ಪ್ರಾಮುಖ್ಯತೆ, ಆಯುರ್ವೇದದ ಜನಪ್ರಿಯತೆ, ಇಂದಿನ ಆಧುನಿಕ ಯುಗದಲ್ಲಿ ಪ್ರಾಚೀನ ಮತ್ತು ನವೀನ ವೈದ್ಯಕೀಯ ಪದ್ಧತಿ ಗಳನ್ನು ಸಮಯೋಚಿತವಾಗಿ ಬಳಸಿಕೊಂಡು ರೋಗಿಗಳ ಕ್ಷೇಮಕ್ಕಾಗಿ ಇರುವ ವಿಪುಲ ಅವಕಾಶಗಳ ಬಗ್ಗೆ ವಿವರಿಸಿದರು. ಕಾಲೇಜಿನ ಸ್ಥಾಪನೆಯಿಂದ ತೊಡಗಿ ಇಲ್ಲಿಯ ತನಕ ನಡೆದು ಬಂದ ದಾರಿ, ವೈದ್ಯಕೀಯ ಕ್ಷೇತ್ರದ ಮಹತ್ವ, ವೈದ್ಯರ ನಿಸ್ವಾರ್ಥ ಮನೋಭಾವದ ಸೇವೆ ಹಾಗೂ ಶಿಸ್ತಿನ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ| ಮೊಹಮ್ಮದ್ ಇಕ್ಬಾಲ್ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಡಾ| ಲೀಲಾಧರ ಡಿವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ| ಹರ್ಷಿತಾ ಪುರುಷೋತ್ತಮ್, ಕೆ ವಿ ಜಿ ಫಾರ್ಮಸಿ ಮತ್ತು ರಿಸರ್ಚ್ ಸೆಂಟರ್ ನ ಸಿ.ಇ.ಒ ಡಾ| ಪುರುಷೋತ್ತಮ ಕೆ ಜಿ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್ಥಿಕ್ ಕೆ ಎಸ್ ಅವರು ಉಪಸ್ಥಿತರಿದ್ದರು. ಡಾ| ಲೀಲಾದರ್ ಡಿ ವಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿ ಡಾ. ಮೊಹಮ್ಮದ್ ಇಕ್ಬಾಲ್ ಅವರು ವಿದ್ಯಾರ್ಥಿಗಳಿಗೆ ಆಯುರ್ವೇದದ ಮಹತ್ವ ಹಾಗೂ ತತ್ವಗಳನ್ನು ತಿಳಿಸುತ್ತಾ ಶುಭಹಾರೈಸಿದರು. ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರಕ್ಕೆ ಬಿಳಿಕೋಟು ಮತ್ತು ಹೂ (ಕಾಲೇಜಿನ ತ್ರೈ ಮಾಸಿಕ ಪತ್ರಿಕೆಯನ್ನು) ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಶ್ವಿನಿ ಭಟ್ ಹಾಗೂ ಚಿತ್ಕಲಾ ಭಾರದ್ವಾಜ್ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಪುರುಷೋತ್ತಮ್ ವಂದಿಸಿದರು. ವಿದ್ಯಾರ್ಥಿಗಳಾದ ಕುಮಾರಿ ಲಕ್ಷ್ಮಿ ಸುರೇಶ್ ಮತ್ತು ಯಶಸ್ವಿನಿ ನಿರೂಪಿಸಿದರು.