ನ್ಯೂಸ್ ನಾಟೌಟ್: ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯ ಹಾಗೂ ವಾರ್ಡ್ ಬಾಯ್ ಮದ್ಯಪಾನದ ಅಮಲಿನಲ್ಲಿ ರೋಗಿಯೊಬ್ಬರಿಗೆ ನಾಲ್ಕೈದು ಬಾರಿ ಇಂಜೆಕ್ಷನ್ ಚುಚ್ಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಾಬರಿಯಾದ ಯುವತಿ ಕುಡುಕ ಡಾಕ್ಟರ್ ಕೈಯಿಂದ ತಪ್ಪಿಸಿಕೊಂಡಿದ್ದು, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್, ವಾರ್ಡ್ ಬಾಯ್ ಮದ್ಯಪಾನ ಮಾಡಿ ಬಂದಿದ್ದರು ಎನ್ನಲಾಗಿದೆ.
ಸ್ನೇಹಾ ಎಂಬ ಯುವತಿ ನವೆಂಬರ್ 3ರಂದು ತೀವ್ರ ಜ್ವರ ಹಾಗೂ ನಿತ್ರಾಣದಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಡಾಕ್ಟರ್ ಪ್ರದೀಪ್, ವಾರ್ಡ್ ಬಾಯ್ ಮಹೇಂದ್ರ ಮದ್ಯಪಾನದ ಅಮಲಿನಲ್ಲಿ ಇದ್ದರು. ಆ ಸಮಯದಲ್ಲಿ ಅವರಿಬ್ಬರೂ ಕರ್ತವ್ಯದಲ್ಲಿ ಇಲ್ಲದಿದ್ದರೂ ರೋಗಿಯನ್ನ ಅಟೆಂಡ್ ಮಾಡಿದ್ದರು. ಮೊದಲಿಗೆ ವಾರ್ಡ್ ಬಾಯ್ ಮಹೇಂದ್ರ, ರೋಗಿ ಸ್ನೇಹಾ ಕೈ ಹಿಡಿದು ಸಿರಿಂಜ್ ಚುಚ್ಚಿದ್ದ. ಡಾ. ಪ್ರದೀಪ್ ಇಂಜೆಕ್ಷನ್ ಹಿಡಿದು ಸ್ನೇಹಾ ಕೈಗೆ ಮತ್ತೊಂದು ಬಾರಿ ಸಿರಿಂಜ್ ಚುಚ್ಚಿದ್ದ. ಅಲ್ಲದೆ, ಮತ್ತೊಮ್ಮೆ ಇಂಜೆಕ್ಷನ್ ಚುಚ್ಚಿದ್ದಲ್ಲದೆ, ಮತ್ತದೇ ಕೆಲಸ ಮಾಡಲು ಮುಂದಾಗಿದ್ದ. ಮೈಕೈಗೆ ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚಿದ್ದರಿಂದ ಸ್ನೇಹಾ ಗಾಬರಿಯಾಗಿದ್ದಾರೆ.
ಇಷ್ಟೆಲ್ಲ ಆಗುತ್ತಿದ್ದಂತೆಯೇ ಸ್ನೇಹಾ ಪೋಷಕರು ಹೆದರಿ, ‘‘ಕುಡಿದು ಬಂದಿದ್ದೀರಾ’’ ಎಂದು ಪ್ರಶ್ನಿಸಿದ್ದರು. ಅಷ್ಟರಲ್ಲಿ ಡಾ. ಪ್ರದೀಪ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ನಂತರ ಸ್ನೇಹಾ ಪೋಷಕರು ವಾರ್ಡ್ ಬಾಯ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೀಗ ಘಟನೆ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ನೇಹಾ ದೂರು ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.