ನ್ಯೂಸ್ ನಾಟೌಟ್: ಬಾಗಿಲು ಇಲ್ಲದ ಬಸ್ಗಳಿಗೆ ಡಿ.10ರ ಒಳಗಾಗಿ ಕಡ್ಡಾಯವಾಗಿ ಬಾಗಿಲು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಸಿಟಿ ಬಸ್ ಹೊರತುಪಡಿಸಿ ನಗರದಿಂದ ಹೊರಡುವ ಎಲ್ಲ ಸಾರಿಗೆ ಬಸ್ಗಳು ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ಗಳ ಬಾಗಿಲು ಮುಚ್ಚುವ ಕ್ರಮವನ್ನು ಬುಧವಾರದಿಂದಲೇ ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ, ಡಿಸಿಪಿ ದಿನೇಶ್ ಕುಮಾರ್ ಈ ವಿಷಯ ಪ್ರಸ್ತಾಪಿಸಿ, ಈ ಹಿಂದೆ ನಡೆದ ಸಭೆಯಲ್ಲಿ ಬಸ್ಗಳಿಗೆ ಬಾಗಿಲು ಅಳವಡಿಸುವ ಸಂಬಂಧ ಸೂಚನೆ ನೀಡಲಾಗಿತ್ತು. ಆದರೆ, ಇದು ಪಾಲನೆಯಾಗುತ್ತಿಲ್ಲ ಎಂದರು. ಸುಮಾರು 1,500 ಖಾಸಗಿ ಬಸ್ಗಳು ಇದ್ದು, ಎಷ್ಟು ಬಸ್ಗಳಿಗೆ ಬಾಗಿಲು ಇವೆ, ಎಷ್ಟು ಬಸ್ಗಳಲ್ಲಿ ಬಾಗಿಲು ಬಳಕೆಯಾಗುತ್ತಿವೆ ಎಂದು ಡಿಸಿ ಪ್ರಶ್ನಿಸಿದರು.
ಎಕ್ಸ್ಪ್ರೆಸ್ ಬಸ್ಗಳಿಗೆ ನಿರ್ದಿಷ್ಟ ಪಾಯಿಂಟ್ಗಳಲ್ಲಿ ಮಾತ್ರ ನಿಲುಗಡೆ ಇರುತ್ತದೆ. ಆದರೆ, ಎಲ್ಲ ಕಡೆಗಳಲ್ಲೂ ಬಸ್ ನಿಲ್ಲಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಆಕ್ಷೇಪಿಸಿದರು. 2017ರ ನಂತರ ಬಂದಿರುವ ಬಸ್ಗಳಿಗೆ ಬಾಗಿಲು ಇದ್ದು, ಅದಕ್ಕೂ ಪೂರ್ವದ ಬಸ್ಗಳಿಗೆ ಬಾಗಿಲು ಇಲ್ಲ ಎಂದು ಬಸ್ ಮಾಲೀಕರೊಬ್ಬರು ಹೇಳಿದರು. ಸಿಟಿ ಬಸ್ಗಳಿಗೆ ಹೆಚ್ಚು ನಿಲುಗಡೆ ಇರುವುದರಿಂದ, ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಆದರೆ, ಉಳಿದ ಎಲ್ಲ ರೀತಿಯ ಬಸ್ಗಳು ಚಾಲನೆಯ ವೇಳೆ ಕಡ್ಡಾಯವಾಗಿ ಬಸ್ ಬಾಗಿಲನ್ನು ಹಾಕಬೇಕು ಎಂದರು.