ನ್ಯೂಸ್ ನಾಟೌಟ್: ತನ್ನ ಗ್ರಾಹಕರಿಗೆ ವಧು ಹುಡುಕಲು ವಿಫಲವಾದ ಕಾರಣ ಗ್ರಾಹಕ ನ್ಯಾಯಾಲಯವು ಬೆಂಗಳೂರಿನ ಮ್ಯಾಟ್ರಿಮೋನಿ ಸಂಸ್ಥೆಗೆ 60 ಸಾವಿರ ರೂ ದಂಡ ವಿಧಿಸಿದ ಘಟನೆ ನಡೆದಿದೆ.
ವ್ಯಕ್ತಿಯೊಬ್ಬರಿಗೆ ವಧು ಹುಡುಕಿಕೊಡಲಿಲ್ಲ ಎಂಬ ಕಾರಣಕ್ಕೇ ಬೆಂಗಳೂರಿನ ಮ್ಯಾಟ್ರಿಮೋನಿ ಪೋರ್ಟಲ್ ದಿಲ್ ಮಿಲ್ ಮ್ಯಾಟ್ರಿಮೋನಿ ಸಂಸ್ಥೆಗೆ ಗ್ರಾಹಕ ರಕ್ಷಣಾ ನ್ಯಾಯಾಲಯವು 60 ಸಾವಿರ ರೂ ದಂಡ ವಿಧಿಸಿದೆ.
ಬೆಂಗಳೂರಿನ ಎಂಎಸ್ ನಗರ ನಿವಾಸಿ ಕೆಎಸ್ ವಿಜಯಕುಮಾರ್ ತಮ್ಮ ಮಗ ಬಾಲಾಜಿಗೆ ಕನ್ಯೆ ಹುಡುಕುತ್ತಿದ್ದರು. ಅದರಂತೆ, ವಿಜಯಕುಮಾರ್ ನಗರದ ಕಲ್ಯಾಣ ನಗರದಲ್ಲಿರುವ ದಿಲ್ ಮಿಲ್ ಮ್ಯಾಟ್ರಿಮೋನಿಗೆ ಭೇಟಿ ನೀಡಿದ್ದರು. ಈ ವೇಳೆ ಸಂಸ್ಥೆ ಬಾಲಾಜಿಗೆ 45 ದಿನಗಳಲ್ಲಿ ವಧು ಹುಡುಕುವುದಾಗಿ ಭರವಸೆ ನೀಡಿತ್ತು. ಬಳಿಕ, ಕೆಎಸ್ ವಿಜಯಕುಮಾರ್ ಮಾರ್ಚ್ 17 ರಂದು ಸಂಸ್ಥಗೆ ತಮ್ಮ ಮಗನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ನೀಡಿದ್ದರು. ಜೊತೆಗೆ 30 ಸಾವಿರ ರೂ. ಶುಲ್ಕ ಕೂಡ ಪಾವತಿಸಿದ್ದರು. 45 ದಿನಗಳು ಕಳೆದರೂ ಸಂಸ್ಥೆ ವಧು ಹುಡುಕಿಕೊಡುವಲ್ಲಿ ವಿಫಲವಾಯಿತು. ಆಗ, ವಿಜಯಕುಮಾರ್ ಅವರು ಹಣ ಮರಳಿಸುವಂತೆ ಹೇಳಿದರು. ಆದರೆ, ಸಂಸ್ಥೆಯ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ.
ಹೀಗಾಗಿ, ವಿಜಯಕುಮಾರ್ ಮಾರ್ಚ್ 30 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆಗ, ಸಂಸ್ಥೆ ಏಪ್ರಿಲ್ 30ರವರೆಗೆ ಕಾಯುವಂತೆ ಮನವಿ ಮಾಡಿಕೊಂಡಿತು. ಒಂದು ತಿಂಗಳು ಕಾದರೂ ದಿಲ್ ಮಿಲ್ ಮ್ಯಾಟ್ರಿಮೋನಿ ಸಂಸ್ಥೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ, ವಿಜಯಕುಮಾರ್ ಮತ್ತೊಮ್ಮೆ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ವಿಜಯ್ ಕುಮಾರ್ ಅವರನ್ನು ನಿಂದಿಸಿ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. ನಂತರ, ವಿಜಯಕುಮಾರ್ ಮೇ5 ರಂದು ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದರು. ಇದಕ್ಕೆ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ. ಹೀಗಾಗಿ, ವಿಜಯಕುಮಾರ್ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ವಿಜಯಕುಮಾರ್ ಅವರ ಆರೋಪಕ್ಕೆ ದಿಲ್ ಮಿಲ್ ಸಂಸ್ಥೆ ಯಾವುದೇ ಉತ್ತರ ನೀಡಲಿಲ್ಲ.
ಇದೀಗ ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಚಾರಣೆ ವೇಳೆ, ದೂರುದಾರರಿಗೆ ಸೇವೆ ಸಲ್ಲಿಸುವ ವೇಳೆ ಸ್ಪಷ್ಟವಾದ ಕೊರತೆ ಕಂಡು ಬಂದಿದೆ. ಇದು ಅನ್ಯಾಯ ಎಂದು ಉಲ್ಲೇಖಿಸಿ, ದೂರುದಾರರು ಸಂಸ್ಥೆಗೆ ನೀಡಲಾದ ಶುಲ್ಕದೊಂದಿಗೆ ಪರಿಹಾರ ಮೊತ್ತವನ್ನೂ ನೀಡಬೇಕೆಂದು ಆದೇಶಿಸಿದ್ದಾರೆ.
ಆದೇಶದ ಅನ್ವಯ ವಿಜಯ್ ಕುಮಾರ್ ಅವರಿಂದ ಶುಲ್ಕವಾಗಿ ಪಡೆದ 30,000 ರೂ., ಸೇವಾ ಕೊರೆತಗೆ 20,000 ರೂ., ಮಾನಸಿಕ ಸಂಕಟ ಉಂಟುಮಾಡಿದ್ದಕ್ಕಾಗಿ 5,000 ರೂ. ವ್ಯಾಜ್ಯಕ್ಕೆ 5,000 ರೂಪಾಯಿಗಳು ಒಟ್ಟು 60 ಸಾವಿರ ರೂ ಹಣವನ್ನು ದಂಡವಾಗಿ ದೂರುದಾರ ವಿಜಯಕುಮಾರ್ ಅವರಿಗೆ ಮರುಪಾವತಿಸುವಂತೆ ಆಯೋಗ ಕಂಪನಿಗೆ ಆದೇಶಿದೆ.
Click