ನ್ಯೂಸ್ ನಾಟೌಟ್: ‘ಹೊಟ್ಟೆ ತುಂಬಿದವ ಎಂದಿಗೂ ಬಡವರ ಪರ ಕಾಳಜಿ ವಹಿಸಲಾರ’ ಎಂಬ ಮಾತನ್ನು ಸುಳ್ಳಾಗಿಸಿದ ಟಾಟಾ ಸಂಸ್ಥೆಗಳ ಒಡೆಯ, ದಿಗ್ಗಜ ದಿವಂಗತ ರತನ್ ಟಾಟಾ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರ ನೆನಪು ಸದಾ ನಮ್ಮೊಂದಿಗೆ ಜೀವಂತವಾಗಿ ಪ್ರಜ್ವಲಿಸುತ್ತಿದೆ.
ಹೌದು, ದೇಶಕ್ಕೆ ಕೊರೋನಾ ಮಹಾಮಾರಿ ಬಂದಾಗ ತನ್ನ ನೌಕರರ ಅನ್ನವನ್ನು ಕಿತ್ತುಕೊಳ್ಳಲಿಲ್ಲ, ತಿಂಗಳ ವೇತನ ನೀಡಿ ನೂರಾರು ಕುಟುಂಬಗಳನ್ನು ಕಷ್ಟದ ಸಂದರ್ಭದಲ್ಲಿಯೂ ಪೊರೆದವರು ರತನ್ ಟಾಟಾ. ಯಾವುದೇ ಪ್ರಶಸ್ತಿ, ಸನ್ಮಾನಗಳನ್ನೂ ಬಯಸಲಿಲ್ಲ. ದ್ವಿಚಕ್ರ ವಾಹನದಲ್ಲಿ ಮಳೆಯ ನಡುವೆ ಬಡ ಕುಟುಂಬ ಪ್ರಯಾಣಿಸಲು ಪಡುವ ಕಷ್ಟವನ್ನು ನೋಡಿ ಅಗ್ಗದ ಬೆಲೆಗೆ ನ್ಯಾನೋ ಕಾರನ್ನು ಪರಿಚಯಿಸಿದರು. ಅಂತಹ ನಾಯಕನಿಗೆ ಸುಳ್ಯದ ಅಡ್ಕಾರು ಬಳಿ ವೈಫೈ ಗೆಳೆಯರ ಬಳಗ ವಿಶೇಷವಾಗಿ ಗೌರವವನ್ನು ಸಲ್ಲಿಸಿದೆ. ರತನ್ ಟಾಟಾ ಹಾಗೂ ನ್ಯಾನೋ ಕಾರು ಮಾದರಿಯ ಗೂಡು ದೀಪ ಎಲ್ಲರನ್ನೂ ಆಕರ್ಷಿಸುತ್ತಿದೆ. ಕತ್ತಲಿನ ಸಮಯದಲ್ಲಿ ಇದು ಇನ್ನೂ ಹೆಚ್ಚು ಪ್ರಜ್ವಲಿಸುತ್ತಿದೆ. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ವೈಫೈ ಗೆಳೆಯರ ಬಳಗದ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ.