ನ್ಯೂಸ್ ನಾಟೌಟ್: ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು ಸೋಮವಾರ(ನ.4) ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಆಗ್ರಹಗಳನ್ನು ಮುಂದಿಟ್ಟುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿಗಳ ಎದುರು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಾಕರ್ತರು ಪಾಲ್ಗೊಳ್ಳಲಿದ್ದಾರೆಂದು ಬಿಜೆಪಿ ತಿಳಿಸಿದೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್ , 1974ರ ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಲು ಆಗ್ರಹಿಸಿ ಮತ್ತು ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಸೋಮವಾರ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದರು.
ಕರ್ನಾಟಕದ ವಕ್ಫ್ ನಲ್ಲಿ ನಡೆದಿರುವ ನಕಲಿ ದಾಖಲೆಗಳ ಸೃಷ್ಟಿ, ಆ ಮೂಲಕ ಮಾಡಿಕೊಂಡಿರುವ ಲಾಭದ ಕುರಿತು ಇ.ಡಿ. (ಜಾರಿ ನಿರ್ದೇಶನಾಲಯ) ತನಿಖೆಯಾಗಬೇಕು. 50 ವರ್ಷದ ಹಿಂದಿನ ಗೆಜೆಟ್ ನೆಪವೊಡ್ಡಿ 50 ವರ್ಷ ಯಾವುದೇ ಕ್ರಮ ಕೈಗೊಳ್ಳದೇ, ಈಗ ಅಲ್ಪಸಂಖ್ಯಾತರ ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ, ಕರ್ನಾಟಕ ವಕ್ಫ್ ಬೋರ್ಡ್ ಮೂಲಕ ಮಾಡಿರುವ ಬೃಹತ್ ದಾಖಲೆಗಳ ಸೃಷ್ಟಿಯ ಎಲ್ಲಾ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ವಕ್ಫ್ ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು, ಮಠಗಳು, ಹಿಂದೂ ದೇವಾಲಯಗಳಿಗೆ ಆತಂಕ ಎದುರಾಗಿದೆ ಎಂದು ಅಶ್ವತ್ ನಾರಾಯಣ್ ಹೇಳಿಕೆ ನೀಡಿದ್ದಾರೆ.
Click