ನ್ಯೂಸ್ ನಾಟೌಟ್: ಕಾಸರಗೋಡಿನ ನೀಲೇಶ್ವರದ ವೀರರ್ ಕಾವ್ ದೇವಸ್ಥಾನದಲ್ಲಿ ಕಳೆದ ಸೋಮವಾರ ರಾತ್ರಿ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಗಾಯಗೊಂಡಿದ್ದ ಯುವಕ ಶನಿವಾರ ಮೃತಪಟ್ಟಿದ್ದಾರೆ.
ಚೊಯ್ಯಂಕೋಟ ಕಿಣಾವೂರ್ ನಿವಾಸಿ ಕುಂಞಿರಾಮ ಮತ್ತು ಎಂ.ಕೆ.ಸಾವಿತ್ರಿ ಅವರ ಪುತ್ರ ಆಟೊ ಚಾಲಕ ಸಿ.ಸಂದೀಪ್ (38 ವರ್ಷ) ಸಾವಿಗೀಡಾದವರು ಎಂದು ತಿಳಿದು ಬಂದಿದೆ. ಕಾಸರಗೋಡು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದ್ದು ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ವೀರರ್ ಕಾವ್ ದೈವಸ್ಥಾನದ ಕಳಿಯಾಟಂ ಮಹೋತ್ಸವಕ್ಕಾಗಿ ಪಟಾಕಿಗಳನ್ನು ತಂದಿರಿಸಲಾಗಿತ್ತು. ಐದು ದೈವಗಳು ನೆಲೆಯಾಗಿರುವ ‘ಸ್ಥಾನ’ದಲ್ಲಿ ಮಂಗಳವಾರ ಮೂವಾಳಂಕುಳಿ ಚಾಮುಂಡಿಯ ತೆಯ್ಯಂ ನಡೆಯಬೇಕಾಗಿತ್ತು. ಇದರ ಅಂಗವಾಗಿ ರಾತ್ರಿ ‘ವೆಳ್ಳಾಟ್ಟಂ’ ಆರಂಭವಾಗುತ್ತಿದ್ದಂತೆ ಪಟಾಕಿ ಸಿಡಿಸಲಾಗಿತ್ತು. ಅದರ ಕಿಡಿಯೊಂದು ಛಾವಣಿ ಇಲ್ಲದ ಶೆಡ್ ನಲ್ಲಿ ಇರಿಸಿದ್ದ ಪಟಾಕಿ ಮೇಲೆ ಬಿದ್ದಿತ್ತು. ತಕ್ಷಣ ಸ್ಫೋಟವಾಗಿತ್ತು.
ಗಾಯಗೊಂಡ 158 ಮಂದಿಯನ್ನು ಮಂಗಳೂರಿನ ಮೂರು ಆಸ್ಪತ್ರೆ ಮತ್ತು ಕಣ್ಣೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ದೇಹದ ಶೇಕಡ 50 ಭಾಗ ಸುಟ್ಟಿದ್ದ ಸಂದೀಪ್ ಅವರಿಗೆ ಕಣ್ಣೂರಿನ ಬೇಬಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶನಿವಾರ ರಾತ್ರಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಪಟಾಕಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾದ ದೈವಸ್ಥಾನದ ಅಧ್ಯಕ್ಷ ಸೇರಿ ಮೂವರಿಗೆ ಜಾಮೀನು ಲಭಿಸಿತ್ತು. ನಾಲ್ವರು ತಲೆಮರೆಸಿಕೊಂಡಿದ್ದಾರೆ.
Click