ನ್ಯೂಸ್ ನಾಟೌಟ್: ಸುಳ್ಯದ ಜನರಿಗೆ ತಲತಲಾಂತರದಿಂದ ಎದುರಾಗುತ್ತಿರುವ ದೊಡ್ಡ ಸಮಸ್ಯೆಯೆಂದರೆ ಅದು ವಿದ್ಯುತ್ ಸಮಸ್ಯೆ, ಜನರ ದೈನಂದಿನ ಬದುಕಿನಲ್ಲಿ ಸದಾ ಕಣ್ಣಾ ಮುಚ್ಚಾಲೆ ಆಡುವ ಇಲ್ಲಿನ ವಿದ್ಯುತ್ ಕಂಡರೆ ಈಗೀಗ ಸುಳ್ಯದ ಜನರಿಗೆ ತೀರ ಅಲರ್ಜಿ ಆಗುವಂತೆ ಮಾಡಿಬಿಟ್ಟಿದೆ.
ಇಲ್ಲಿ ಪ್ರತಿ ಸಲವೂ ದಿನವೊಂದಕ್ಕೆ ನೂರಾರು ಬಾರಿ ಬಂದು ಹೋಗುವ ಕರೆಂಟ್ ಕನಿಷ್ಟ ಹಬ್ಬದ ದಿನವಾದರೂ ಇರುತ್ತದೆ ಅಂದುಕೊಂಡರೆ ಅಂದು ಕೂಡ ರಜೆ ಹಾಕಿ ಬೋರಲು ಮಲಗಿರುತ್ತದೆ. ಈ ಪರಿಸ್ಥಿತಿಗೆ ಸುಳ್ಯ ತಲುಪಿದರೂ ಒಬ್ಬರೂ ಈ ಬಗ್ಗೆ ಧ್ವನಿ ಎತ್ತದ ಪರಿಸ್ಥಿತಿಯಲ್ಲಿ ಇರುವುದು ವಿಪರ್ಯಾಸ..! ಬೆರಳೆಣಿಕೆ ಮಂದಿ ಮನವಿ, ಪ್ರತಿಭಟನೆ ನಡೆಸಿದರೂ ಇದುವರೆಗೆ ಯಾವುದೇ ಪ್ರಯೋಜನ ಆಗಿಲ್ಲ, ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ, ಯಾವಾಗ ಕರೆಂಟ್ ಬರುತ್ತದೆ ಇನ್ಯಾವಾಗ ಹೋಗುತ್ತದೆ ಅನ್ನುವುದೇ ಇಲ್ಲಿನ ಜನರಿಗೆ ತರ್ಕಕ್ಕೆ ಸಿಗದ ವಿಚಾರ. ಗುರುವಾರ (ಅ.31) ದೇಶದೆಲ್ಲೆಡೆ ಹಿಂದೂಗಳ ಸಂಭ್ರಮದ ನರಕ ಚತುರ್ದಶಿ ಹಬ್ಬ ಆಚರಣೆ, ಅಂತೆಯೇ ಸಾಂಪ್ರದಾಯಿಕ ಎಣ್ಣೆ ಸ್ನಾನ ಮಾಡಿಕೊಂಡು ಸಂಭ್ರಮಿಸುವುದಕ್ಕೆ ಸುಳ್ಯದ ಜನರು ಕೂಡ ಸಿದ್ಧವಾಗಿದ್ದರು. ಬೆಳಗ್ಗೆ ಕೆಲಸದ ನಿಮಿತ್ತ ಎಣ್ಣೆ ಸ್ನಾನ ಮಾಡಿಕೊಳ್ಳಲು ಆಗದವರು ಸಂಜೆ ಬೇಗ ಮನೆಗೆ ಬಂದು ಎಣ್ಣೆ ಹಚ್ಚಿಕೊಂಡು ಸ್ನಾನಕ್ಕೆ ಇಳಿಯಬೇಕು ಅನ್ನುವಷ್ಟರಲ್ಲಿ ಕರೆಂಟ್ ಪಡ್ಚ ಆಗಿದೆ. ಆಮೇಲೆ ಬಂದದ್ದು ಎಲ್ಲರು ಭಾರೀ ನಿದ್ರೆಯಲ್ಲಿ ಮಲಗಿದ್ದ ಸಮಯದಲ್ಲಿ, ಇತ್ತ ಎಣ್ಣೆ ಹಾಕಿ ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಕರೆಂಟ್ ಅವಲಂಬಿಸಿದವರು ಹಿಡಿಶಾಪ ಹಾಕುವಂತಾಯಿತು. ಈ ಬಗ್ಗೆ ಸಾರ್ವಜನಿಕರು ಭಾರಿ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಮುಂದೆ ಸರಿ ಆಗುತ್ತದೆ ಅನ್ನುವ ಜನರ ಭರವಸೆ ಯಾವಾಗ ಈಡೇರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.