ದೀಪ ಜ್ಯೋತಿಃ ಪರಬ್ರಹ್ಮ
ದೀಪ ಜ್ಯೋತಿರ್ಜನಾರ್ದನಃ
ದೀಪೋ ಹರತು ಮೇ ಪಾಪಂ
ದೀಪ ಜ್ಯೋತಿರ್ನಮೋಸ್ತುತೇ
( ದೀಪದ ಬೆಳಕು ಪರಮ ಬ್ರಹ್ಮನನ್ನು ಪ್ರತಿನಿಧಿಸುತ್ತದೆ, ದೀಪದ ಬೆಳಕು ಜನಾರ್ದನ (ಶ್ರೀವಿಷ್ಣು) ನನ್ನು ಪ್ರತಿನಿಧಿಸುತ್ತದೆ, ದೀಪವು ಪಾಪಗಳನ್ನು ತೊಡೆದು ಹಾಕಲಿ, ದೀಪದ ಬೆಳಕಿಗೆ ನನ್ನ ನಮಸ್ಕಾರಗಳು)
ದೀಪದಿಂದ ಹೊರಹೊಮ್ಮುವ ಬೆಳಕು ಕತ್ತಲೆ, ಅಜ್ಞಾನ ಮತ್ತು ದುಷ್ಟತನವನ್ನು ಹೋಗಲಾಡಿಸುವುದರ ಸಂಕೇತ. ಜ್ಞಾನ ಅಥವಾ ಬುದ್ಧಿವಂತಿಕೆಯು ಸಂಪತ್ತಿನ ಶ್ರೇಷ್ಠ ರೂಪವಾಗಿರುವುದರಿಂದ ದೀಪದ ಬೆಳಕು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆ ನಿಟ್ಟಿನಲ್ಲಿ ದೀಪಗಳ ಹಬ್ಬವೆಂದೇ ಕರೆಯುವ ದೀಪಾವಳಿಯನ್ನು ದೀಪಗಳನ್ನು ಬೆಳಗಿಸುವ ಮೂಲಕ ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಭಾರತದ ವಿಶಾಲವಾದ ಸಾಂಸ್ಕೃತಿಕ ಪರಿಸರದ ಅವಿಭಾಜ್ಯ ಅಂಗವಾಗಿ, ಭವ್ಯವಾದ ಹಬ್ಬವಾಗಿ ಆಚರಿಸಲಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.
ಪ್ರತಿ ಹಳ್ಳಿ, ಪಟ್ಟಣ, ನಗರವು ಸಾವಿರಾರು ದೀಪಗಳಿಂದ ಬೆಳಗುತ್ತದೆ. ದೀಪಗಳಿಂದ ಹೊರ ಸೂಸುವ ಈ ಕಿರಣಗಳು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ. ಅದೇ ಮನುಷ್ಯ ಜೀವನಕ್ಕೆ ಬಂದಾಗ ಅಜ್ಞಾನವನ್ನು ತೊಲಗಿಸಿ ಜ್ಞಾನದೆಡೆಗೆ ಹೆಜ್ಜೆ ಇಡುವುದರ ಪ್ರತೀಕವಾಗಿದೆ. ಈ ರೀತಿಯ ಜ್ಞಾನದ ಪ್ರತಿರೂಪವಾದ ಮಂಗಳಕರವಾದ ದೀಪವು ಸೂರ್ಯ ಮತ್ತು ಅಗ್ನಿಯ ಸಂಕೇತ. ಭಾರತೀಯ ಪರಂಪರೆಯಲ್ಲಿ ಜ್ಯೋತಿಗೆ ಒಂದು ವಿಶೇಷವಾದ ಮಹತ್ವವಿದೆ. ವೇದದಲ್ಲಿ ಅಗ್ನಿ ಅಥವಾ ಇಂದ್ರನ ನಂತರ ಬರುವ ದೇವತೆಯೇ ಅಗ್ನಿ. ದೀಪದ ಕಲ್ಪನೆ ಬಂದಂದಿನಿಂದ ನಾಗರಿಕತೆ ಹೊಸ ಶಕ್ತಿಯನ್ನು ಪಡೆಯಿತು. ಬೆಳಕು ಮನುಷ್ಯನಿಗೆ ಜ್ಞಾನ ಮೂಲವೆಂದು ಪರಿಭಾವಿಸುವುದರೊಂದಿಗೆ ಸಾಂಸ್ಕೃತಿಕ ಪರಂಪರೆಯಲ್ಲಿ ದೀಪ ಪವಿತ್ರವಾದುದೆಂದು ಭಾವಿಸಲಾಯಿತು. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳಲ್ಲೂ ಚಿನ್ನದ ಮತ್ತು ಬೆಲೆಬಾಳುವ ಹರಳುಗಳ ದೀಪಗಳ ಉಲ್ಲೇಖವಿದೆ.
ಪುರಾಣ ಸಾಹಿತ್ಯಗಳಲ್ಲಿ ದೀಪಗಳ ಬೆಳವಣಿಗೆಗಳನ್ನು ಕಾಣುತ್ತೇವೆ. ವಿಷ್ಣುವಿನ ಅವತಾರಗಳಲ್ಲಿ ದೇವಸ್ಥಾನಗಳಲ್ಲಿರುವ ದೀಪಗಳು ಶ್ರೇಷ್ಠತೆಯನ್ನು ಪಡೆದಿವೆ. ಭಾರತೀಯ ಜಾನಪದದಲ್ಲಿ ದೀಪಗಳಿಗೆ ವೈಶಿಷ್ಟ್ಯ ಪೂರ್ಣವಾದ ಸ್ಥಾನವಿದೆ. ಪ್ರಾಚೀನ ಕಾಲದಲ್ಲಿ ದೀಪಗಳನ್ನು ಕಲ್ಲು ಅಥವಾ ಚಿಪ್ಪಿನಿಂದ ಮಾಡುತ್ತಿದ್ದರೆ ನಂತರದ ದಿನಗಳಲ್ಲಿ ಮಣ್ಣಿನ ಮತ್ತು ಲೋಹದ ದೀಪಗಳು ಚಾಲ್ತಿಗೆ ಬಂದವು. ಆರಂಭದಲ್ಲಿ ಬಟ್ಟಲಿನಾಕಾರದಲ್ಲಿದ್ದ ದೀಪಗಳು ನಂತರ ಅಲಂಕೃತವಾದ ಪೀಠಗಳೊಂದಿಗೆ ಕಾಣಿಸಿಕೊಳ್ಳತೊಡಗಿದವು. ಪ್ರಾಚೀನ ಭಾರತೀಯ ವಾಸ್ತುಶಿಲ್ಪ, ಶಾಸನ ಮುಂತಾದವುಗಳಲ್ಲಿ ದೀಪಗಳ ಉಲ್ಲೇಖವನ್ನು ಕಾಣುತ್ತೇವೆ. ಐದು ಸಾವಿರ ವರ್ಷಗಳ ಹಿಂದೆ ಬೀದಿ ದೀಪಗಳು ಇದ್ದವು ಎಂದು ಮೊಹೆಂಜೋದಾರದಲ್ಲಿ ನಡೆಸಿದ ಉತ್ಪನ್ನಗಳಿಂದ ತಿಳಿಯುತ್ತವೆ. ಮನೆಯ ಪ್ರಧಾನ ಬಾಗಿಲಿನಲ್ಲಿ ದೀಪಗಳನ್ನು ಉರಿಸಿಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ಭಾರತೀಯ ಶಿಲ್ಪಗಳಲ್ಲಿ ದೀಪಗಳ ಚಿತ್ರಣ ಸಾಮಾನ್ಯವಾಗಿ ಕಂಡುಬರುತ್ತದೆ.
ಇತಿಹಾಸದಲ್ಲಿ ರಾಜರುಗಳ ಕಾಲದಲ್ಲಿ ಮೇಲ್ಚಾವಣಿಯ ಸಾಲು ದೀಪಗಳನ್ನು ಅಥವಾ ಸ್ತಂಭದೀಪಗಳನ್ನು ವೈವಿಧ್ಯಪೂರ್ಣ ರೀತಿಗಳಲ್ಲಿ ಬೆಳಗಿಸುತ್ತಿದ್ದರು. ದಕ್ಷಿಣ ಭಾರತದ ಚೋಳರ ಕಾಲದ ತಾಮ್ರ ಪತ್ರವೊಂದರಲ್ಲಿ ನಂದಾದೀಪದ ಉಲ್ಲೇಖವಿದೆ. ದೀಪಗಳನ್ನು ಕೆಲವೊಮ್ಮೆ ಹರಕೆಯ ದೀಪಗಳಾಗಿಯೂ ತನ್ನ ಮನಸ್ಸಿನ ಬಯಕೆಯ ಈಡೇರಿಕೆಗಾಗಿ ದೇವರನ್ನು ಪ್ರಾರ್ಥಿಸಿ, ತನ್ನ ಬಯಕೆ ಈಡೇರಿದಾಗ ಹರಕೆ ದೀಪಗಳನ್ನು ಹೊತ್ತಿಸಿ ದೇವರಿಗೆ ಅರ್ಪಿಸುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ಅದರಲ್ಲಿ ಭಾವನಾ ಸೌಂದರ್ಯವನ್ನು ಗಮನಿಸಲು ಸಾಧ್ಯವಾಗುತ್ತಿತ್ತು.
ಆದಿವಾಸಿ ಜನಾಂಗದಲ್ಲಿ ಮನೆಯ ಯಜಮಾನಿಯಾದ ತಾಯಿ ಕಬ್ಬಿಣದಿಂದ ಮಾಡಿದ ದೀಪವನ್ನು ಹಚ್ಚುವುದು ರೂಢಿಯಲ್ಲಿದೆ. ಗುಡ್ಡಗಾಡು ಜನಾಂಗದವರು ಹಿಟ್ಟಿನಿಂದ ದೀಪಗಳನ್ನು ಮಾಡಿ ಅವುಗಳಿಗೆ ಆನೆ, ಕುದುರೆ, ನವಿಲುಗಳ ಆಕಾರಗಳನ್ನು ಕೊಟ್ಟು ಅಲಂಕರಿಸಿ ಮದುವೆ, ಹಬ್ಬ ಮುಂತಾದ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ಹೀಗೆ ಬೇರೆ ಬೇರೆ ಜನಾಂಗದವರು ಬೇರೆ ಬೇರೆ ಸಂದರ್ಭಗಳಲ್ಲಿ ವಿಶೇಷವಾದ ದೀಪಗಳನ್ನು ಮಾಡಿ ಬಳಸುತ್ತಾರೆ. ದೀಪಗಳಲ್ಲಿ ನಾನಾ ಬಗೆಗಳಿವೆ. ಅರ್ಚನಾ ದೀಪ, ದೀಪಲಕ್ಷ್ಮಿ, ಆರತಿ ದೀಪ, ನಂದಾದೀಪ, ತೂಗುದೀಪ, ಕಾಲು ದೀಪ ಹೀಗೆ ಮೊದಲಾದ ಬಗೆಯ ದೀಪಗಳನ್ನು ಬಳಸುತ್ತಿದ್ದು, ಪೂಜೆಗಾಗಿ ಸಾಮಾನ್ಯವಾಗಿ ಬಳಸುವ ದೀಪ ಅರ್ಚನಾ ದೀಪ. ಪ್ರಾರ್ಥನೆಗಾಗಿ ಆರತಿ ದೀಪ, ದೇವರ ಮುಂದೆ ನಂದಾದೀಪ, ಸರಪಳಿಗಳಿಂದ ತೂಗು ಹಾಕಿದ ತೂಗುದೀಪ, ಸ್ತಂಭದಂತ ಪೀಠದ ಮೇಲೆ ಕಾಲು ದೀಪ ಮೊದಲಾದ ದೀಪಗಳನ್ನು ಬಳಸುತ್ತೇವೆ.
ಹೀಗೆ ದೀಪಗಳನ್ನು ವಿವಿಧ ಸಂದರ್ಭಗಳಲ್ಲಿ ಚಿತ್ತಾಕರ್ಷಕ ವಿನ್ಯಾಸಗಳೊಂದಿಗೆ ಬಳಸುವ ಸಂಪ್ರದಾಯ ಎಲ್ಲೆಡೆ ಇದೆ. ಮಾನವ ಜೀವನದ ಅವಿಭಾಜ್ಯ ಅಂಗವಾಗಿ ದೀಪ ಜ್ಯೋತಿ ಹುಟ್ಟಿನಿಂದ ಸಾಯುವರೆಗೆ ಒಂದಲ್ಲ ಒಂದು ರೂಪದಲ್ಲಿ ಬಳಸಲ್ಪಡುತ್ತದೆ. ದೀಪ ಜ್ವಾಲೆಯನ್ನು ಧರಿಸಿ ಶುಭ ಅಶುಭಗಳನ್ನು ಹೇಳುವ ಪದ್ಧತಿಯನ್ನೂ ನಾವು ನಾಡಿನಲ್ಲೆಡೆ ಕಾಣುತ್ತೇವೆ. ಪುರುಷೋತ್ತಮ ಮಹಾತ್ಮೆಯಲ್ಲಿ ದೀಪ ಒಣಗಿದರೆ ಸಂಪತ್ತು ನಾಶ ಎಂದೂ, ಬಿಳಿ ಜ್ವಾಲೆ ಅನ್ನನಾಶದ ಸೂಚಕವಾಗಿ, ಅತಿ ಕೆಂಪು ಜ್ವಾಲೆ ಯುದ್ಧದ ಸಂಕೇತ ಎಂದೂ, ಕಪ್ಪು ಜ್ವಾಲೆ ಮರಣದ ಸಂಕೇತವೆಂದು ಹೇಳಿರುವುದನ್ನು ಗಮನಿಸಬಹುದು. ದೀಪದ ಜ್ಯೋತಿ ಗಾಳಿಗೆ ನಂದಿದರೆ ಅಥವಾ ಕೈ ಜಾರಿ ಕೆಳಗೆ ಬಿದ್ದರೆ ಅಶುಭವೆಂದು ಭಾವಿಸುತ್ತಾರೆ.
ಅದೇನಿದ್ದರೂ “ತಮಸೋಮ ಜ್ಯೋತಿರ್ಗಮಯ” ಎಂದು ಪ್ರಾರ್ಥಿಸಿದ ಭಾರತೀಯರು ಜ್ಯೋತಿಯನ್ನು ‘ಜ್ಯೋತಿಷ್ಯಾಂ ಜ್ಯೋತಿರುತ್ತಮಂ’ ಎಂದು ತಿಳಿದಿದ್ದರು. ಈ ರೀತಿಯಾಗಿ ಜ್ಯೋತಿಗೆ ಮಹತ್ವವನ್ನು ಕೊಡುವ ಭಾರತ ದೇಶದಲ್ಲಿ ದೀಪಾವಳಿ ದೀಪದ ಹಬ್ಬವಾಗಿ ಕರೆಯಲ್ಪಡುತ್ತದೆ. ದೀಪಾವಳಿ ಎಂದರೆ ದೀಪಗಳ ಸಾಲು. ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬವೇ ದೀಪಾವಳಿ. ಇದು ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೊಳೆದು ಶುಭ್ರವಾದ ಬದುಕನ್ನು ಕಟ್ಟಿಕೊಳ್ಳಲು ಎಡೆ ಮಾಡಿಕೊಡುವ ಹಬ್ಬವಾಗಿದೆ. ಇದನ್ನು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಆಚರಿಸುತ್ತಾರೆ. ಒಂದೊಂದು ಸ್ಥಳದಲ್ಲಿ, ಒಂದೊಂದು ಧರ್ಮದಲ್ಲಿ ಭಿನ್ನವಾಗಿ ಆಚರಿಸಲ್ಪಡುವ ದೀಪಾವಳಿಯು ಹಿಂದೂ ಧರ್ಮದಲ್ಲಿ: ಶ್ರೀರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸಿದರೆ, ಇನ್ನು ಕೆಲವರು ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನವೆಂದೂ, ಹಾಗೆಯೇ ಬಲಿ-ವಾಮನರ ಕಥೆಯಲ್ಲಿ ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸುವಂತ ಪದ್ಧತಿ ಇದೆ.
ದೀಪಾವಳಿಯ ಅಂಗವಾಗಿ ಆಯುಧ ಪೂಜೆ, ಗೋಪೂಜೆ, ಲಕ್ಷ್ಮಿ ಪೂಜೆಗಳನ್ನು ಮಾಡುತ್ತಾರೆ. ಸಿಖ್ ಧರ್ಮದಲ್ಲಿ: ಸಿಖ್ ಧರ್ಮದವರಿಗೆ ದೀಪಾವಳಿ ಪ್ರಮುಖ ಹಬ್ಬವಾಗಿದ್ದು 1620 ರಲ್ಲಿ ಸಿಖ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್ ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವಾದುದರಿಂದ ‘ಬಂಧಿ ದಿವಾನ್’ ಎಂದು ಆಚರಿಸುತ್ತಾರೆ. ಜೈನ ಧರ್ಮದಲ್ಲಿ: ಜೈನ ಧರ್ಮದಲ್ಲಿ ಕಾರ್ತಿಕ ಮಾಸದಲ್ಲಿ ಮೂರು ದಿನಗಳ ಕಾಲ ದೀಪಾವಳಿಯನ್ನು ಆಚರಿಸುತ್ತಿದ್ದು ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತುರ್ದಶಿಯಂದು ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ. ಹೀಗೆ ಒಂದೆಡೆ ದೀಪಾವಳಿ ದೀಪಗಳ ಹಬ್ಬವಾಗಿ ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಿ ಸುಜ್ಞಾನವೆಂಬ ಬೆಳಕ ಬೀರಿ ಮನೆ ಮನ ಬೆಳಗುವ ಹಬ್ಬವಾದರೆ, ಇನ್ನೊಂದೆಡೆ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿದ ಹಬ್ಬವಾಗಿ ಆಚರಿಸಲ್ಪಡುತ್ತದೆ.
ಅದೇ ರೀತಿ ಇಂದಿನ ವಾಸ್ತವದಲ್ಲೂ ಜನರ ಮನಸ್ಸಿನಲ್ಲಿರುವ ಕಲ್ಮಶಗಳು ನಾಶವಾಗಿ ಎಲ್ಲರಲ್ಲೂ ಸ್ವಚ್ಛ, ಸ್ವಸ್ಥ ಹಾಗೂ ಶುಭ್ರ ಮನಸ್ಸುಗಳು ಒಡಮೂಡುವಂತಾಗಲಿ. ಯಾವ ಹಿನ್ನೆಲೆಯಿಂದ ದೀಪಾವಳಿಯ ಆಚರಣೆ ಬಂತೋ ಅದೇ ರೀತಿ ವಾಸ್ತವದಲ್ಲಿ ಸಮಾಜಘಾತಕ ಶಕ್ತಿಗಳು ನಾಶವಾಗಿ ಸತ್ಪ್ರಜೆಗಳು ಸೇರಿ ಸದೃಢ ದೇಶ ಕಟ್ಟುವಲ್ಲಿ ದೀಪಗಳ ಹಬ್ಬ ದೀಪಾವಳಿ ನಾಂದಿಯಾಗಲಿ. ಇಂತಹ ಆಚರಣೆಗಳು ಕೇವಲ ಒಂದು ದಿನದ ಆಡಂಬರದ ಆಚರಣೆಗೆ ಸೀಮಿತವಾಗದೆ ದೀಪಗಳ ರೀತಿ ಜನರ ಮನಸ್ಸನ್ನು ಸದಾ ಬೆಳಗುಂತಾಗಲಿ.
ಸಂಸ್ಕೃತಿ, ಸಂಸ್ಕಾರ, ಆಚಾರ- ವಿಚಾರಗಳು ದೈನಂದಿನ ಜೀವನದ ಉಸಿರಾಗಲಿ. “ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ ಓಂ ಶಾಂತಿ ಶಾಂತಿ ಶಾಂತಿ ಅಂದರೆ ಅವಾಸ್ತವದಿಂದ (ಅಸತ್ಯದಿಂದ) ವಾಸ್ತವದಡೆಗೆ (ಸತ್ಯದೆಡೆಗೆ), ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಅಮರತ್ವದೊಡೆಗೆ ನಡೆಸು. ಶುಭಂ ಕರೋತಿ ಕಲ್ಯಾಣಮಾರೋಗ್ಯಂ ಧನ ಸಂಪದಾ| ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೇ|| ಅಂದರೆ ಶುಭ ಕಲ್ಯಾಣ, ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಯನ್ನು ನೀಡುವವನೇ, ದೀಪದ ಜ್ವಾಲೆಯೇ ಶತ್ರುತ್ವದ ಚಿಂತನೆಯ ನಾಶಕ್ಕಾಗಿ ನಿನಗೆ ನಮಸ್ಕಾರ.
ಡಾ. ಅನುರಾಧಾ ಕುರುಂಜಿ
ಸಹಾಯಕ ಪ್ರಾಧ್ಯಾಪಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು “ವಿಕಸನ”- ಸುಳ್ಯ
9448205970