ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ಸಂಘದ ವತಿಯಿಂದ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್ ಉತ್ಸವ್ 2k24 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಹರಿಪ್ರಸಾದ್ ಎಸ್ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕುರಿತಾದ ಉಪಯುಕ್ತ ಮಾಹಿತಿ ನೀಡುತ್ತಾ “ಸ್ಪರ್ಧಾತ್ಮಕ ಜಗತ್ತಲ್ಲಿ ನಾವೇ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು” ಎಂದು ಕಿವಿಮಾತು ನುಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್.ಎಂ.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ.ಡಿ ವಿದ್ಯಾರ್ಥಿಗಳಿಗೆ ಫೆಸ್ಟ್ನ ಅಗತ್ಯತೆ ಬಗ್ಗೆ ಮಾತಾನಾಡಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಆಂತರಿಕ ಗುಣಮಟ್ಟ ಖಾತರಿ ಕೋಶ ನಿರ್ದೇಶಕಿ ಮಮತಾ.ಕೆ ಹಾಗೂ ಕಾರ್ಯಕ್ರಮದ ಸಂಚಾಲಕರುಗಳಾದ ಶ್ರೀಧರ್.ವಿ, ಗೀತಾ ಶೆಣೈ, ದಿವ್ಯ.ಟಿ.ಎಸ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ದಿವ್ಯ ಟಿ.ಎಸ್. ಸ್ವಾಗತಿಸಿ, ತೃತೀಯ ಬಿಕಾಂ ವಿದ್ಯಾರ್ಥಿನಿಯರಾದ ಅನ್ವಯ ಹಾಗೂ ಕೀರ್ತಿ ಪ್ರಾರ್ಥಿಸಿದರು. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ 8 ತಂಡಗಳು ಭಾಗವಹಿಸಿ ಹಣಕಾಸು, ಪೋಟೋಗ್ರಫಿ, ಉತ್ತಮ ನಿರ್ವಹಕ, ಉತ್ತಮ ಆಡಳಿತ ನಿರ್ವಹಣೆ, ಮಾರುಕಟ್ಟೆ ಮೊದಲಾದವುಗಳನ್ನು ತಮ್ಮ ಜೀವನದಲ್ಲಿ ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್.ಎಂ.ಎಂ ವಹಿಸಿದ್ದರು. ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ.ಡಿ., ಫೆಸ್ಟ್ನ ಸಂಚಾಲಕರಾದ ಶ್ರೀಧರ.ವಿ ,ಗೀತಾ ಶೆಣೈ,ದಿವ್ಯ ಟಿ.ಎಸ್ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.