ನ್ಯೂಸ್ ನಾಟೌಟ್: ನಾಲ್ಕು ದಶಕಗಳ ಹಳೆಯ ಭೂ ವಿವಾದವೊಂದರಲ್ಲಿ ಏನೂ ಅರಿಯದ 17 ವರ್ಷದ ಬಾಲಕನ ಶಿರಚ್ಛೇದ ಮಾಡಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ಅ.30ರಂದು ನಡೆದಿದೆ.
ಖಡ್ಗಧಾರಿಗಳಾದ ಕೆಲವು ವ್ಯಕ್ತಿಗಳು 17 ವರ್ಷದ ಬಾಲಕನ ತಲೆ ಕತ್ತರಿಸಿದ್ದು, ತಾಯಿ ತನ್ನ ಮಗನ ರುಂಡವನ್ನು ತನ್ನ ಮಡಿಲಲ್ಲಿಟ್ಟುಕೊಂಡು ರೋಧಿಸುತ್ತಿರುವುದು ಹೃದಯವಿದ್ರಾವಕವಾಗಿತ್ತು.
ಕಬಿರುದ್ದೀನ್ ಗ್ರಾಮದಲ್ಲಿ ಇಬ್ಬರ ನಡುವೆ ಭೂಮಿ ವ್ಯಾಜ್ಯ ಉಂಟಾಗಿತ್ತು, ಇದು ತೀವ್ರಸ್ವರೂಪ ಪಡೆದುಕೊಂಡು ಅ.30 ರಂದು ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆಯಲ್ಲಿ ರಾಮ್ಜಿತ್ ಯಾದವ್ ಎಂಬುವರ 17 ವರ್ಷದ ಪುತ್ರನ ಶಿರಚ್ಛೇದವಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿರಚ್ಛೇದ ಮಾಡಿದ ವ್ಯಕ್ತಿ ತಪ್ಪಿಸಿಕೊಂಡಿದ್ದು ಆತನಿಗಾಗಿ ಹುಡುಕಾಟ ಆರಂಭವಾಗಿದೆ.
ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಹಲವು ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಬಾಲಕನ ತಾಯಿ ತುಂಡರಿಸಿದ ತಲೆಯನ್ನು ಮಡಿಲಲ್ಲಿ ಇರಿಸಿಕೊಂಡು ಹಲವು ಗಂಟೆಗಳ ಕಾಲ ರೋಧಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಮಾತನಾಡಿ, 40 ರಿಂದ 45 ವರ್ಷಗಳಿಂದ ಇದ್ದ ಜಮೀನು ವಿವಾದ ತಾರಕಕ್ಕೇರಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
Click