ನ್ಯೂಸ್ ನಾಟೌಟ್: ಮಹಾಕುಂಭ ಮೇಳದ ವೇಳೆ ಹಿಂದೂಯೇತರರಿಗೆ ಅಂಗಡಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಖಿಲ ಭಾರತೀಯ ಅಖಾರಾ ಪರಿಷದ್ (ಎಬಿಎಪಿ) ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ಮುಂದಿನ ವಾರ ಪ್ರಯಾಗ್ ರಾಜ್ ನಲ್ಲಿ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ನಿರ್ಧಾರವನ್ನು ಅನುಮೋದಿಸಲಾಗುವುದು ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿದ ಎಬಿಎಪಿ ಅಧ್ಯಕ್ಷ ಹಾಗೂ ಮಾನಸದೇವಿ ಟ್ರಸ್ಟ್ ಅಧ್ಯಕ್ಷ ಮಹಾಂತ ರವೀಂದ್ರ ಪುರಿ ಎಂಬವರು ‘ಯಾವ ಸಂಸ್ಥೆ ಅಥವಾ ಅಂಗಡಿ ಮಾಲೀಕರು ಹಿಂದೂ, ಸಿಕ್ಖ್, ಬೌದ್ಧ ಅಥವಾ ಜೈನರಾಗಿರದಿದ್ದರೆ, ಅಂಥವರಿಗೆ ಡೇರೆಗಳನ್ನು ಹಾಕಲು ಜಾಗ ಮತ್ತು ಸೌಲಭ್ಯಗಳನ್ನು ನೀಡುವುದಿಲ್ಲ. ಯಾವುದೇ ಜಾತಿ ಅಥವಾ ಧರ್ಮದ ವಿರುದ್ಧ ದ್ವೇಷದ ಭಾವನೆ ಇಲ್ಲ. ಆದರೆ ಪ್ರತಿದಿನ ಉಗುಳು ಹಾಗೂ ಮೂತ್ರ ವಿಸರ್ಜಿಸಿ ಆಹಾರವನ್ನು ಕಲುಷಿತಗೊಳಿಸಿ ನೀಡುವ ವಿಡಿಯೊಗಳು ಕಾಣಿಸುತ್ತಿವೆ ಇದರಿಂದ ಅಸಮಾಧಾನಗೊಂಡು ಈ ನಿರ್ಧಾರಕ್ಕೆ ಬರಲಾಗಿದೆ’ ಎಂದರು.
“ಸನಾತನ ಧರ್ಮದ ಅನುಯಾಯಿಗಳ ಭಾವನೆಗೆ ಇದರಿಂದ ಘಾಸಿಯಾಗಿದೆ. ಕುಂಭ ಮೇಳ ಪ್ರದೇಶದಲ್ಲಿ ಯಾರಾದರೂ ಇಂಥ ಕೃತ್ಯಗಳನ್ನು ಎಸಗಿದರೆ, ನಾಗ ಸನ್ಯಾಸಿಗಳಿಗೆ ಕೋಪ ಬರಬಹುದು ಹಾಗೂ ಹಿಂಸೆಗೆ ಅದು ಕಾರಣವಾಗಬಹುದು. ಏಕೆಂದರೆ ಧರ್ಮ ಮತ್ತು ಸಂಪ್ರದಾಯದ ವಿಚಾರದಲ್ಲಿ ಹಸ್ತಕ್ಷೇಪವನ್ನು ಅವರು ಸಹಿಸಲಾರರು. ಇಡೀ ಮೇಳದ ಸ್ವರೂಪವನ್ನೇ ಅದು ಹಾಳುಗೆಡವಬಹುದು” ಎಂದರು.
“ಇದನ್ನು ತಪ್ಪಿಸಲು ಆಡಳಿತ ವರ್ಗ ಈಗಿನಿಂದಲೇ ಎಚ್ಚರ ವಹಿಸಬೇಕು. ಮೇಳ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ” ಎಂದು ಟ್ರಸ್ಟ್ ಅಧ್ಯಕ್ಷ ತಿಳಿಸಿದರು.
Click