ನ್ಯೂಸ್ ನಾಟೌಟ್: ಮುಂದಿನ ವರ್ಷದಿಂದ ಎಲ್ಲಾ ವೃತ್ತಿಪರ ಕೋರ್ಸ್ ಗಳ ನೋಂದಣಿಯನ್ನು ವಿದ್ಯಾರ್ಥಿಗಳ ಆಧಾರ್ ನೊಂದಿಗೆ ಲಿಂಕ್ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
‘ಸೀಟ್ ಬ್ಲಾಕಿಂಗ್’ ದಂಧೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರಾಧಿಕಾರವು ಇಂಥದೊಂದು ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. “ಈ ಪ್ರಸ್ತಾವನೆಯನ್ನು ಈಗಾಗಲೇ ಇ-ಆಡಳಿತ ಇಲಾಖೆಗೆ ಸಲ್ಲಿಸಿದೆ. ಇ-ಆಡಳಿತ ಇಲಾಖೆಯು ನಮ್ಮ ಪ್ರಸ್ತಾವನೆಗೆ ಪರವಾಗಿದೆ ಮತ್ತು ಅವರು ಅನುಮೋದನೆಗಾಗಿ ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
ನೋಂದಣಿಯಲ್ಲಿ ಯಾವುದೇ ವಂಚನೆಯನ್ನು ತಡೆಗಟ್ಟಲು ಮತ್ತು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್ ಗಳಲ್ಲಿಯೇ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಆಧಾರ್-ಲಿಂಕ್ಡ್ ನೋಂದಣಿಯನ್ನು ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ.
ಎಂಜಿನಿಯರಿಂಗ್ ಸೀಟು ಹಂಚಿಕೆಯ ಎಲ್ಲಾ ಸುತ್ತುಗಳು ಪೂರ್ಣಗೊಂಡ ನಂತರ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಕೋಟಾದಡಿ ಸೀಟ್ ಬ್ಲಾಕಿಂಗ್ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಇಎ ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಹಲವಾರು ವಿದ್ಯಾರ್ಥಿಗಳು ಒಂದೇ ಐಪಿ ವಿಳಾಸವನ್ನು ಬಳಸಿಕೊಂಡು ಸೀಟು ಬ್ಲಾಕ್ ಮಾಡಿದ್ದಾರೆ. ಅವರು ಕೆಇಎಗೆ ನೀಡಿದ ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳು ನಕಲಿ ಎಂದು ಕಂಡುಬಂದಿದೆ. ಕೆಲ ಸಂದರ್ಭಗಳಲ್ಲಿ ಉನ್ನತ ಕಾಲೇಜುಗಳಲ್ಲಿ ಡಿಮ್ಯಾಂಡ್ ಇರುವ ವಿಭಾಗಗಳಲ್ಲಿ ಸೀಟುಗಳನ್ನು ಆರಿಸಿಕೊಂಡ ವಿದ್ಯಾರ್ಥಿಗಳು ಆ ಕಾಲೇಜುಗಳಿಗೆ ದಾಖಲಾಗದಿರುವುದು ಕಂಡುಬಂದಿದೆ. ಇದರ ಪರಿಣಾಮದಿಂದ ಕೆಸಿಇಟಿ ಕೋಟಾದಡಿ ಬರುವ ಅಂಥ ಎಲ್ಲಾ ಸೀಟುಗಳು ಮ್ಯಾನೇಜ್ ಮೆಂಟ್ ಕೋಟಾಕ್ಕೆ ಸೇರುವಂತಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ತಡೆಗಟ್ಟಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಇಎ ಮಾಹಿತಿ ನೀಡಿದೆ.
Click