ನ್ಯೂಸ್ ನಾಟೌಟ್: ಸುಳ್ಯದಲ್ಲಿ ಸರ್ಕಾರಿ 108 ಆಂಬ್ಯುಲೆನ್ಸ್ ಇದ್ದೂ ಇಲ್ಲದಂತಾಗಿದೆ. ರೋಗಿಗಳನ್ನು ಯಾವುದೇ ಸಂದರ್ಭದಲ್ಲಿ ಎಂತಹುದೇ ಪರಿಸ್ಥಿತಿಯಲ್ಲೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿರುವ ಈ ವಾಹನ ಸುಳ್ಯದಲ್ಲಿ ಮಾತ್ರ ವಿಭಿನ್ನ ಕಾನೂನನ್ನು ಹೊಂದಿದಂತಿದೆ. ಆಂಬ್ಯುಲೆನ್ಸ್ ನವರ ಈ ಪಟ್ಟಿನಿಂದ ರೋಗಿ ಸ್ಥಿತಿ ಮಾತ್ರ ಹೈರಾಣಾಗಿದೆ. ಅವರ ಕುಟುಂಬದವರು ಮತ್ತೊಂದು ಆಂಬ್ಯುಲೆನ್ಸ್ ಮೂಲಕ ಸುಳ್ಯದ ಸರ್ಕಾರಿ ಆಸ್ಪತ್ರೆಯಿಂದ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಸುಳ್ಯದ ಪಾಲಿಗೆ ಈ ಆಂಬ್ಯುಲೆನ್ಸ್ ಇದ್ದೂ ಸತ್ತಂತೆ ಅಂದರೂ ತಪ್ಪಾಗಲಿಕ್ಕಿಲ್ಲ.
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ 108 ವಾಹನ ನಿಲುಗಡೆ ಮತ್ತು ಸಿಬ್ಬಂದಿಗೆ ವಿಶ್ರಾಂತಿಗೆ ವ್ಯವಸ್ಥೆ ಇಲ್ಲ,ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವುದಿಲ್ಲ ಎಂದು 108 ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಬೆಕ್ಕಿಗೆ ಚೆಲ್ಲಾಟ ಆದರೆ ಇಲಿಗೆ ಪ್ರಾಣ ಸಂಕಟ ಎಂಬಂತೆ ಇವರಿಬ್ಬರ ನಡುವಿನ ತಿಕ್ಕಾಟಕ್ಕೆ ಬಡಪಾಯಿ ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟ ಆಡುವುದು ಯಾವ ನ್ಯಾಯ..? ಎಂದು ಜನರು ಈಗ ಸಿಟಿಗೆದ್ದಿದ್ದಾರೆ. ತಮಗೆ ಸವಲತ್ತು ಸಿಗದಿದ್ದರೆ ಅದನ್ನು ನ್ಯಾಯಯುತವಾಗಿ ಮಾತುಕತೆ ಮೂಲಕ ಬಗೆ ಹರಿಸುವುದು ಬಿಟ್ಟು ಇಂತಹ ಮೊಂಡು ಹಠಕ್ಕೆ ಬಿದ್ದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.