ನ್ಯೂಸ್ ನಾಟೌಟ್: ಬೆಂಗಳೂರಿನ ಜೆ.ಪಿ. ನಗರ 1ನೇ ಹಂತದಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್ ಮಳಿಗೆಯ ಗೋಡೆ ಕೊರೆದು 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣ ದೋಚಿದ್ದ 10 ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಜೆ.ಪಿ. ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಜಾರ್ಖಂಡ್ ಮೂಲದ ಎ.ಎಂ. ಹುಸೈನ್ (23),ಮನರುಲ್ಲಾ ಹಕ್ (30), ಸೈಫುದ್ದೀನ್ ಶೇಖ್ (36), ಮನರುಲ್ಲಾ ಶೇಖ್ (65), ಸುಲೇಮಾನ್ ಶೇಖ್ (49),ಸಲೀಂ ಶೇಖ್ (36), ರಮೇಶ್ ಬಿಸ್ತಾ (37), ಜಹೂರ್ ಆಲಂ(28), ಅಜಿಜೂರ್ ರೆಹೆಮಾನ್ (27), ಶೈನೂರ್ ಬೀಬಿ(65) ಎಂದು ಗುರುತಿಸಲಾಗಿದೆ.
ಇನ್ನು ಬಂಧಿತ ಆರೋಪಿಗಳಿಂದ 55 ಲಕ್ಷ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಳೆದ ಮಾರ್ಚ್ನಲ್ಲಿ ಜ್ಯುವೆಲ್ಲರಿಗೆ ಹೊಂದಿಕೊಂಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದು, ೨ ವಾರಗಳ ಕಾಲ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಮನೆಯೊಳಗಿನಿಂದ ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿ ಕೊರೆಯಲು ಆರಂಭಿಸಿದ್ದರು. ಇನ್ನು ಏ.17ರಂದು ಇತ್ತ ಗೋಡೆ ಕೊರೆದು ಜ್ಯುವೆಲ್ಲರ್ ನೊಳಗೆ ನುಗ್ಗಿದ ಆರೋಪಿಗಳು, ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ ಲಾಕರ್ ಅನ್ನು ಗ್ಯಾಸ್ ಕಟ್ಟರ್ ನಿಂದ ಕೊರೆದು 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ರಾತ್ರೋ-ರಾತ್ರಿ ದೋಚಿದ್ದರು.