ನ್ಯೂಸ್ ನಾಟೌಟ್: ಯುವಕನೊಬ್ಬ ಕಾಡಾನೆ ಎದುರು ಸೆಲ್ಫಿ ತೆಗೆಯಲು ಹೋಗಿ ಜೀವವನ್ನೇ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಗುರುವಾರ(ಅ.24) ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಮೃತ ಯುವಕನನ್ನು ಶ್ರೀಕಾಂತ್ ರಾಮಚಂದ್ರ ಸಾತ್ರೆ (23) ಎಂದು ಗುರುತಿಸಲಾಗಿದೆ.
ಶ್ರೀಕಾಂತ್ ಕೇಬಲ್ ಅಳವಡಿಕೆ ಕಾರ್ಯ ನಿರ್ವಹಿಸುತ್ತಿದ್ದು ಅದರಂತೆ ಗುರುವಾರ ಗಡ್ಚಿರೋಲಿ ಅರಣ್ಯ ಪ್ರದೇಶದ ಬಳಿ ತನ್ನ ಇತರ ಇಬ್ಬರು ಸ್ನೇಹಿತರ ಜೊತೆ ಕೇಬಲ್ ಅಳವಡಿಕೆ ಕಾರ್ಯ ನಿರ್ವಹಿಸುತ್ತಿರುವ ವೇಳೆ ಅರಣ್ಯದಲ್ಲಿ ಕಾಡಾನೆ ಸದ್ದು ಕೇಳಿದೆ, ಕಾಡಾನೆ ನೋಡುವ ಸಲುವಾಗಿ ಶ್ರೀಕಾಂತ್ ಹಾಗೂ ಗೆಳೆಯರ ತಂಡ ಅರಣ್ಯದೊಳಗೆ ಪ್ರವೇಶಿಸಿದ್ದಾರೆ.
ಅಲ್ಲಿ ಕಾಡಾನೆಯನ್ನು ಕಂಡಿದ್ದಾರೆ, ಈ ವೇಳೆ ಶ್ರೀಕಾಂತ್ ದೂರದಲ್ಲೇ ನಿಂತು ಕಾಡಾನೆಯ ಜೊತೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ, ಅಷ್ಟೋತ್ತಿಗಾಗಲೇ ಮದವೇರಿದ ಆನೆ ಶ್ರೀಕಾಂತ್ ನ ಮೇಲೆ ದಾಳಿ ಮಾಡಿದೆ ಅಲ್ಲದೆ ಜೊತೆಗಿದ್ದ ಇಬ್ಬರು ಗೆಳೆಯರು ಕೂದಲೆಳೆ ಅಂತರದಲ್ಲಿ ಆನೆ ದಾಳಿಯಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಶ್ರೀಕಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶ್ರೀಕಾಂತ್ ನನ್ನು ತುಳಿದು ಹಾಕಿದ ಕಾಡಾನೆ ಬಳಿಕ ದಟ್ಟ ಅರಣ್ಯದೊಳಗೆ ಪ್ರವೇಶಿಸಿದೆ ಎಂದು ಆತನ ಜೊತೆಗಿದ್ದವರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.