ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ವತಿಯಿಂದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯ ಕಲಿಯುತ್ತಿರುವ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಶುಕ್ರವಾರ (ಅ.25) ಕೃಷಿ ಕ್ಷೇತ್ರ ಅಧ್ಯಯನ ಪ್ರವಾಸ ಆಯೋಜಿಸಲಾಯಿತು.
ವಿದ್ಯಾರ್ಥಿಗಳಿಗೆ ಸುಳ್ಯ ಪರಿಸರದ ಕೆಲವು ಕೃಷಿ ಸಾಧಕರನ್ನು ಭೇಟಿ ಮಾಡಿ ಕೃಷಿ ಕ್ಷೇತ್ರ ವೀಕ್ಷಿಸಿ, ಅಲ್ಲಿನ ವಿಶೇಷತೆಗಳು, ಅವರ ಕೃಷಿ ಸಾಧನೆಗಳನ್ನು ಪರಿಚಯಿಸಲಾಯಿತು.
ಕೃಷಿ ಕ್ಷೇತ್ರ ಅಧ್ಯಯನದಲ್ಲಿ ಬೆಳಗ್ಗೆ ಚೊಕ್ಕಾಡಿ ಅಜ್ಜನಗದ್ದೆ ಸಮೀಪ ಚಂದ್ರಶೇಖರ್ ಸುಬ್ಬಯ್ಯಮೂಲೆಯವರ ಮನೆಗೆ ಭೇಟಿ ನೀಡಿ ತರಕಾರಿ ಕೃಷಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಇಲ್ಲಿ ರಬ್ಬರ್ ಗಿಡಗಳನ್ನು ಕಡಿದು ಆಧುನಿಕ ವಿಧಾನದಲ್ಲಿ ಇಸ್ರೇಲ್ ಮಾದರಿ ಕೃಷಿ ಕೈಗೊಂಡಿದ್ದು ಬೆಂಡೆಕಾಯಿ, ಸೌತೆಕಾಯಿ, ಟೊಮೆಟೊ ಇತ್ಯಾದಿ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಪರಿಕರಗಳು, ನಿರ್ವಹಿಸುವ ವಿಧಾನಗಳು ಮತ್ತು ಮುಂಜಾಗ್ರತಾ ಕ್ರಮಗಳು, ಮಾರುಕಟ್ಟೆ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.
ಮಧ್ಯಾಹ್ನ ಬೆಳ್ಳಾರೆಯ ಕುರಿಯಾಜೆ ತಿರುಮಲೇಶ್ವರ ಭಟ್ ಅವರನ್ನು ಭೇಟಿಯಾಗಿ ಅವರು ಬೆಳೆದಿರುವ ಹಲವು ದೇಶ, ವಿದೇಶಿ ಹಣ್ಣಿನ ಗಿಡಗಳ ಬಗ್ಗೆ ತಿಳಿದುಕೊಂಡು ಪುಂಗನೂರು ತಳಿಯ ದನ, ಮನೆಯಂಗಳದಲ್ಲಿ ನಿರ್ಮಿಸಿದ ಉದ್ಯಾನವನ ವೀಕ್ಷಿಸಲಾಯಿತು.
ಅಪರಾಹ್ನ ಐವರನಾಡು ಗ್ರಾಮದ ಪದ್ಮ ಕೋಲ್ಚರ್ ಅವರನ್ನು ಭೇಟಿಯಾಗಿ ನೈಸರ್ಗಿಕ ಕೃಷಿ ವಿಧಾನದ ಬಗ್ಗೆ ಸಮಗ್ರ ವಿವರ ಪಡೆದುಕೊಂಡು ಅವರ ವಿನೂತನ ಕೃಷಿ ಪ್ರಯೋಗಗಳು, ನೀರಿನ ಸಂರಕ್ಷಣೆಯ ಮಾದರಿ, ಜೀವಮೃತ ತಯಾರಿ, ಸುಭಾಷ್ ಪಾಳೇಕಾರ್ ಪದ್ಧತಿಯಲ್ಲಿ ಕೃಷಿ ಪ್ರಾರಂಭ ಮತ್ತು ನಿರ್ವಹಣೆ ಹಾಗೂ ಸರಾಸರಿ ಲಾಭಾಂಶದ ವಿವರಣೆ ಪಡೆದುಕೊಳ್ಳಲಾಯಿತು. ಅಧ್ಯಯನ ಪ್ರವಾಸದಲ್ಲಿ ಭೇಟಿ ನೀಡಿದ ಎಲ್ಲ ಕೃಷಿ ಸಾಧಕರಿಗೆ ಸ್ಮರಣಿಕೆಯಾಗಿ ಗಿಡಗಳನ್ನು ನೀಡಿ ಗೌರವಿಸಲಾಯಿತು. ಈ ಶಿಬಿರದ ನೇತೃತ್ವವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಹಾಗೂ ಉಪನ್ಯಾಸಕರಾದ ಅಕ್ಷತಾ ಬಿ, ಕೃತಿಕಾ ಕೆ.ಜೆ. ಮತ್ತು ಅಜಿತ್ ಕುಮಾರ್ ವಹಿಸಿದ್ದರು. ಕಾಲೇಜು ಸಿಬ್ಬಂದಿ ಭವ್ಯ ಮತ್ತು ಪೂವಪ್ಪ ಸಹಕರಿಸಿದರು.