ನ್ಯೂಸ್ ನಾಟೌಟ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಕಾವಾಡಿಗ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಇಂದು(ಅ.24) ನಡೆದಿದೆ.
ಕಾವಾಡಿಗ ಗೋಪಾಲ್ ಎಂಬವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಆನೆ ಪಾಲನಾ ಕೇಂದ್ರ ಪ್ರದೇಶದ ಸೀಗೆಕಟ್ಟೆ ಕೆರೆಯಲ್ಲಿ 10 ವರ್ಷದ ಸಂಪತ್ ಎಂಬ ಆನೆಯನ್ನು ಸ್ವಚ್ಛಗೊಳಿಸುವ ವೇಳೆ ಈ ಘಟನೆ ನಡೆದಿದೆ.
ಆನೆಯನ್ನು ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ಕಾವಾಡಿಗನೂ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಸ್ಥಳದಲ್ಲಿಯೇ ಇದ್ದ ಇತರೆ ಸಿಬ್ಬಂದಿ ಅವರನ್ನು ರಕ್ಷಿಸಿಸಲು ಪ್ರಯತ್ನಿಸಿದರೂ, ಸಫಲವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಉದ್ಯಾನದ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಪೊಲೀಸರು, ಈಜು ತಜ್ಞರು, ಅಗ್ನಿ ಶಾಮಕ ದಳದ ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ ಗೋಪಾಲ್ ಮೃತದೇಹವನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.