ನ್ಯೂಸ್ ನಾಟೌಟ್: ಮಳೆಗಾಲದಲ್ಲಿ ರಬ್ಬರ್ ಬೆಳೆಗಾರರಿಗೆ ಖುಷಿಯೋ ಖುಷಿ, ‘ಸಣಪ ರೇಟ್ ಆತ್ ಗಡ (ಒಳ್ಳೆ ದರ ಆಯಿತಂತೆ) ಅಂತ ನಮ್ಮ ಸುಳ್ಯ ಭಾಗದ ರೈತರು ಹಿರಿಹಿರಿ ಹಿಗ್ಗಿದ್ದರು. ಈ ಖುಷಿ ರಬ್ಬರ್ ಕೃಷಿಕರ ಮಟ್ಟಿಗೆ ಬಹು ದಿನ ಉಳಿಯಲಿಲ್ಲ ಅನ್ನೋದು ನೋವಿನ ಸಂಗತಿ. ಮಳೆಗಾಲದಲ್ಲಿ ಏರಿಕೆಯಾಗಿದ್ದ ದರ ಈಗ ಕುಸಿತದತ್ತ ಸಾಗಿದೆ. ಕೃಷಿಕರು ಚಿಂತಾಕ್ರಾಂತರಾಗುವಂತೆ ಮಾಡಿದೆ.
ಈ ವರ್ಷದ ಜುಲೈ ತಿಂಗಳ ಮೊದಲು ಕೆ.ಜಿ ರಬ್ಬರ್ಗೆ (ಗ್ರೇಡ್) 200ಕ್ಕಿಂತ ಕಡಿಮೆ ಧಾರಣೆ ಇತ್ತು. ಬಳಿಕದಲ್ಲಿ ನಿಧಾನ ಗತಿಯಲ್ಲಿ ಹೆಚ್ಚಳ ಕಂಡು ಆಗಸ್ಟ್ ವೇಳೆಗೆ ಗ್ರೇಡ್ ರಬ್ಬರ್ ಕೆಜಿಗೆ 244-255 ರೂ. ವರೆಗೂ ದರ ಏರಿಕೆ ಕಂಡಿತ್ತು. ಈಗ ಏಕಾಏಕಿ ಇಳಿಕೆ ಕಾಣಲು ಆರಂಭಿಸಿದೆ. ಅಕ್ಟೋಬರ್ ಆರಂಭದಲ್ಲಿ 210ಕ್ಕೆ ತಲುಪಿತ್ತು. ಅ.22 ರಂದು ಗ್ರೇಡ್ ರಬ್ಬರ್ ಕೆಜಿಗೆ 178 ಹಾಗೂ ರಬ್ಬರ್ ಸ್ಕ್ರಾಪ್ ಕೆ.ಜಿಗೆ 112ರಂತೆ ಕ್ಯಾಂಪ್ಕೋ ಸಂಸ್ಥೆಯಲ್ಲಿ ವ್ಯವಹಾರ ನಡೆದಿದೆ. ರಬ್ಬರ್ ಧಾರಣೆಯಲ್ಲಿ ಇನ್ನಷ್ಟು ಕುಸಿತ ಮುಂದುವರಿಯುವ ಆತಂಕ ರಬ್ಬರ್ ಬೆಳೆಗಾರರಲ್ಲಿ ಕಾಡುತ್ತಿದೆ.
ರಬ್ಬರ್ ಈಗ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದೆ. ಈ ಕಾರಣದಿಂದ ದೇಶಿಯ ರಬ್ಬರ್ ಉತ್ಪಾದಕರ ಧಾರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಕುಸಿತದಿಂದ ಚೇತರಿಸಿಕೊಂಡರೆ ಸರಿ ಆಗಬಹುದು, ಆದರೆ ರೂ.200ಕ್ಕಿಂತ ಕಡಿಮೆ ಆದರೆ ರಬ್ಬರ್ ಬೆಳೆಗಾರರಿಗೆ ತೀವ್ರ ಕಷ್ಟವಾಗಲಿದೆ ಎನ್ನಲಾಗುತ್ತಿದೆ.
Click