ನ್ಯೂಸ್ ನಾಟೌಟ್: ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಇತ್ತೀಚೆಗೆ ಬಂಧನವಾಗಿದ್ದ ಬಹುಭಾಷಾ ನಟ ಬಾಲ ಮೂರನೇ ಮದುವೆ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯ ಸಿನಿಮಾದಲ್ಲಿ ನಟಿಸಿರುವ ಬಾಲ ಬುಧವಾರ ಬೆಳಗ್ಗೆ(ಅ.23ರಂದು) ಎರ್ನಾಕುಲಂನ ಕಾಲೂರ್ ಪಾವಕುಲಂ ದೇವಸ್ಥಾನದಲ್ಲಿ ಆತ್ಮೀಯರ ಸಮ್ಮುಖದಲ್ಲಿ ಕೋಕಿಲ ಎನ್ನುವವರ ಜತೆ ಮೂರನೇ ಬಾರಿಗೆ ಹಸೆಮಣೆ ಏರಿದ್ದಾರೆ ಎನ್ನಲಾಗಿದೆ.
2010ರಲ್ಲಿ ಬಾಲ ಗಾಯಕಿ ಅಮೃತ ಸುರೇಶ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಮನಸ್ತಾಪದಿಂದಾಗಿ 2019ರಲ್ಲಿ ಬಾಲ – ಅಮೃತಾ ವಿಚ್ಚೇದನ ಪಡೆದಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗುವಿದೆ. ಇದಾದ ಬಳಿಕ 2021ರಲ್ಲಿ ಬಾಲ ಎಲಿಜಬೆತ್ ಉದಯನ್ ಎಂಬಾಕೆಯೊಂದಿಗೆ ಎರಡನೇ ಮದುವೆ ಆಗಿದ್ದರು. ಆದರೆ ಬಾಲ ಅವರು ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಕಾರಣದಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗಷ್ಟೇ ಲಿವರ್ ಕಸಿ ಚಿಕಿತ್ಸೆಗೆ ಒಳಗಾಗಿದ್ದ ಬಾಲ ತನ್ನ ಜತೆಯಾಗಿರಲು ಸಂಗಾತಿಯೊಬ್ಬಳ ಅಗತ್ಯವಿದೆ ಹೇಳಿದ್ದರು. ಈ ವೇಳೆ ಬಾಲ ವಿರುದ್ಧ ಮಾಜಿ ಪತ್ನಿ ಅಮೃತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
“ಬಾಲ ಸಾಮಾಜಿಕ ಜಾಲತಾಣದ ಮೂಲಕ ತನ್ನನ್ನು ಹಾಗೂ ತನ್ನ ಮಗಳನ್ನು ನಿಂದಿಸಿ ಪೋಸ್ಟ್ ಮಾಡಿದ್ದಾರೆ. ಇದಲ್ಲದೆ ಬಾಲ ವಿಚ್ಛೇದನದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ. ನನ್ನನ್ನು ಹಾಗೂ ನನ್ನ 12 ವರ್ಷದ ಮಗಳನ್ನು ಕೆಲ ಸಂದರ್ಶನದಲ್ಲಿ ಬೇಕಂತಲೇ ನಿಂದಿಸಿ ಮಾತನಾಡಿದ್ದಾರೆ. ಇದರಿಂದ ತಾವು ಮಾನಸಿಕವಾಗಿ ನೊಂದಿದ್ದೇವೆ” ಎಂದು ಮಾಜಿ ಪತ್ನಿ ದೂರಿನಲ್ಲಿ ತಿಳಿಸಿದ್ದರು. ಪೊಲೀಸರು ಬಾಲ ಅವರನ್ನು ಬಂಧಿಸಿದ್ದರು. ಆ ಬಳಿಕ ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನಲ್ಲಿ ಹೊರ ಬಂದು ಈಗ ಮತ್ತೆ ಮದುವೆಯಾಗಿದ್ದಾರೆ.
Click