ನ್ಯೂಸ್ ನಾಟೌಟ್: ರಷ್ಯಾ ಸೇನೆ ಸೇರ್ಪಡೆಯಾಗಿ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗಿಯಾಗಿದ್ದ 85 ಮಂದಿ ಭಾರತೀಯರನ್ನು ರಷ್ಯಾ ಸೇನೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸೋಮವಾರ(ಅ.22) ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಇನ್ನೂ 20 ಮಂದಿ ಭಾರತೀಯರು ರಷ್ಯಾ ಸೇನೆಯಿಂದ ಬಿಡುಗಡೆಗೊಳ್ಳಬೇಕಿದ್ದು, ಅವರನ್ನೂ ಆದಷ್ಟು ಶೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಭಾರತ ಮನವಿ ಮಾಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
“ಅಕ್ರಮವಾಗಿ ಅಥವಾ ಗುತ್ತಿಗೆ ಆಧಾರದಲ್ಲಿ ರಷ್ಯಾ ಸೇನೆ ಸೇರ್ಪಡೆಯಾಗಿರುವ ಭಾರತೀಯರ ಕುರಿತು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯದ ಸಮನ್ವಯಕಾರರೊಂದಿಗೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ. ಈ ವಿಷಯವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಉನ್ನತ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಚರ್ಚಿಸಲಿದ್ದಾರೆ” ಎಂದು ಮಿಸ್ರಿ ಹೇಳಿದ್ದಾರೆ.
ರಷ್ಯಾದ ಕಝನ್ ನಗರದಲ್ಲಿ ಆಯೋಜನೆಗೊಂಡಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ತೆರಳುವುದಕ್ಕೂ ಒಂದು ದಿನ ಮುನ್ನ, ಈ ಪ್ರಕ್ರಿಯೆ ನಡೆದಿದೆ.
Click