ನ್ಯೂಸ್ ನಾಟೌಟ್: ದಾರಿಯಲ್ಲಿ ಹೋಗುವಾಗ ಒಂದು ರೂಪಾಯಿ ಬಿದ್ದು ಸಿಕ್ಕಿದರೂ ಜನ ಖುಷಿಯಿಂದ ಹೆಕ್ಕಿಕೊಂಡು ಜೇಬಿಗೆ ಇಳಿಸುತ್ತಾರೆ. ಅಂಥಹುದರಲ್ಲಿ ಮಳೆಯ ನೀರಿನಲ್ಲಿ ಹಣದ ರಾಶಿ ಕೊಚ್ಚಿಕೊಂಡು ಬಂದರೆ ಜನ ಸುಮ್ಮನಿರ್ತಾರಾ ಹೇಳಿ..?
ಇತ್ತೀಚೆಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟಪಡಿ ಬಳಿಯ ಮೋರಿಯಲ್ಲಿ ₹500 ನೋಟುಗಳು ತೇಲಾಡಿಕೊಂಡು ಬಂದಿದ್ದವು. ಮಳೆ ಪ್ರವಾಹಕ್ಕೆ ಒಮ್ಮೊಮ್ಮೆ ಶವಗಳೇ ಕೊಚ್ಚಿಕೊಂಡು ಬರುತ್ತವೆ. ಆದರೇ ಮಹಾರಾಷ್ಟ್ರದ ಅಟಪಡಿ ಜನಕ್ಕೆ ಮೋರಿಯಲ್ಲಿ ₹500 ನೋಟುಗಳು ಸಿಕ್ಕಿವೆ. ಹಾಗಾಗಿಯೇ ಜನ ಅದೃಷ್ಟ ಖುಲಾಯಿಸಿದೆ ಅಂತ ಜೇಬಿಗೆ ಹಾಕಿಕೊಂಡಿದ್ದಾರೆ. ಜನರು ಮೊದಲಿಗೆ ಇದು ನಕಲಿ ನೋಟು ಅಂದುಕೊಂಡಿದ್ದರು. ತೀರಾ ಒಂದು ನೋಟನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಇದು ಅಸಲಿ ನೋಟು ಅನ್ನೋದು ಗೊತ್ತಾಗಿದ್ದು.
ಮಳೆಯ ನೀರು ಸಾಗಿ ಹೋಗುವ ಮೋರಿ ಒಂದಷ್ಟು ಹೊತ್ತು ನೂರಾರು ಜನರನ್ನು ಆಕರ್ಷಿಸಿಬಿಟ್ಟಿತ್ತು. ನೋಡ ನೋಡುತ್ತಲೇ ಅಲ್ಲಿ ಬಂದವರ ಕೈಗೆಲ್ಲಾ ₹500 ನೋಟುಗಳು ಸಿಕ್ಕಿಬಿಟ್ಟವು. ನೋಟು ಹೆಕ್ಕಿದವರಿಗೆಲ್ಲ 1 ಸಾವಿರ, 5 ಸಾವಿರ, 10, 50 ಸಾವಿರದವರೆಗೂ ಸಿಕ್ಕಿವೆ. ಹೀಗೆ ಏಕಾಏಕಿ ಆ ಮೋರಿ ಬಳಿ ಬಂದವರಿಗೆ ಅದೃಷ್ಟ ಲಕ್ಷಿಯೇ ಸಿಕ್ಕಂತಾಗಿ ಎಲ್ಲರ ಮುಖದಲ್ಲೂ ಖುಷಿ, ಇಷ್ಟು ಖುಷಿಯಲ್ಲಿ ಕೆಲವರಿಗೆ ಮೈಗಂಟಿದ ಕೆಸರೂ ಕೂಡ ಕಾಣಿಸಲಿಲ್ಲ ಅನ್ನುವುದು ವಿಶೇಷ.
ಇಷ್ಟೊಂದು ನೋಟುಗಳನ್ನು ನೀರಿಗೆ ಎಸೆದಿದ್ದು ಯಾರು? ಅನ್ನೋ ಯೋಚನೆ ಮಾಡುತ್ತಿದ್ದಾರೆ. ಸುಮಾರು 2 ರಿಂದ 2.5 ಲಕ್ಷದಷ್ಟು ₹500ರ ನೋಟುಗಳು ಮೋರಿಯಲ್ಲಿ ಸಿಕ್ಕಿವೆ. ಕೆಲವರಂತೂ ತಮಗೆ ಸಿಕ್ಕ ಹಣ ಎಷ್ಟು ಅನ್ನೋದನ್ನೂ ಹೇಳುತ್ತಿಲ್ಲ. ಒಂದು ವೇಳೆ ಪೊಲೀಸರು ಬಂದು ವಾಪಾಸ್ ಪಡೀಬಹುದು ಅನ್ನೋ ಭಯದಲ್ಲಿದ್ದಾರೆ. ಹಾಗಾಗಿಯೇ ಇಲ್ಲಿ ಅಚಾನಕ್ ಆಗಿ ಸಿಕ್ಕಿರೋ ಹಣ 2.5 ಲಕ್ಷಕ್ಕಿಂತಲೂ ಹೆಚ್ಚು ಎಂದೇ ಭಾವಿಸಲಾಗಿದೆ. ಅಲ್ಲದೇ, ಈ ಹಣದ ವಾರಸುದಾರರು ಯಾರು ಅನ್ನೋ ಪ್ರಶ್ನೆಗೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.