ನ್ಯೂಸ್ ನಾಟೌಟ್: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ರ ಮೆಗಾ ಹರಾಜಿಗಾಗಿ ದಿನಾಂಕ ನಿಗದಿಯಾಗಿದೆ. ಅದರಂತೆ ಮುಂದಿನ ತಿಂಗಳು ನವೆಂಬರ್ 24 ಮತ್ತು 25 ರಂದು ಮೆಗಾ ಆಕ್ಷನ್ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇನ್ನು ಈ ಬಾರಿಯ ಮೆಗಾ ಹರಾಜು ಅರಬ್ಬರ ನಾಡಿನಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.
ಐಪಿಎಲ್ ಮೆಗಾ ಹರಾಜಿಗೂ ಮುನ್ನ 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ರಿಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಅಕ್ಟೋಬರ್ 31ರವರೆಗೆ ಗಡುವು ನೀಡಲಾಗಿದ್ದು, ಹೀಗಾಗಿ ಈ ತಿಂಗಳಾಂತ್ಯದಲ್ಲಿ ಪ್ರತಿ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಹೊರಬೀಳಲಿದೆ.
ಐಪಿಎಲ್ ಮೆಗಾ ಹರಾಜು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿ ನಡೆಯಲಿದೆ. ಈ ಹಿಂದೆ ಸಿಂಗಾಪುರ್, ದುಬೈ ಅಥವಾ ಲಂಡನ್ನಲ್ಲಿ ಮೆಗಾ ಆಕ್ಷನ್ ನಡೆಯಲಿದೆ ಎಂದು ವರದಿಯಾಗಿತ್ತು. ಆದರೀಗ ಸೌದಿ ಅರೇಬಿಯಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.
ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ 600 ಕ್ಕೂ ಅಧಿಕ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಆಟಗಾರರ ಹೆಸರು ನೋಂದಣಿ ನಡೆಯಲಿದ್ದು, ಇದಾದ ಬಳಿಕ ಆಟಗಾರರ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಹೀಗೆ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಆಟಗಾರರ ಹೆಸರು ಮಾತ್ರ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.
ಹಾಗೆಯೇ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ 6 ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗೆ ಉಳಿಸಿಕೊಂಡ ಆಟಗಾರರಿಗೆ ಒಟ್ಟು ಹರಾಜು ಮೊತ್ತದಿಂದ 79 ಕೋಟಿ ರೂ. ವ್ಯಯಿಸಬೇಕೆಂಬ ಷರತ್ತನ್ನು ವಿಧಿಸಲಾಗಿದೆ. ಒಂದು ವೇಳೆ 5 ಆಟಗಾರರನ್ನು ರಿಟೈನ್ ಮಾಡಿಕೊಂಡರೆ 75 ಕೋಟಿ ರೂ. ಖರ್ಚು ಮಾಡಬೇಕು ಎಂದು ತಿಳಿಸಲಾಗಿದೆ.
Click