ನ್ಯೂಸ್ ನಾಟೌಟ್: ದೇವರ ಹಾವು ಅಂದ್ರೆ ನಾಗರ ಹಾವಿನ ಸಾವನ್ನು ನೋಡಿದವರಿಗೆ ಸರ್ಪ ದೋಷ ಉಂಟಾಗುತ್ತದೆ ಅನ್ನುವ ನಂಬಿಕೆ ಈಗಲೂ ಇದೆ. ಅದರಲ್ಲೂ ತುಳುನಾಡಿನಲ್ಲಿ ನಾಗರ ಹಾವಿಗೆ ವಿಶೇಷವಾದ ಆರಾಧನೆ ಪೂಜೆ ನಡೆಯುತ್ತದೆ. ಹೆಚ್ಚಿನವರ ಮನೆಯಲ್ಲಿ ನಾಗನ ಕಟ್ಟೆ ಇದೆ. ವರುಷಕ್ಕೊಮ್ಮೆ ಅಲ್ಲಿ ಪೂಜೆಯೂ ನಡೆಯುತ್ತದೆ. ಬನದ ಹಾವು ಅಂತ ಕರೆಯಿಸಿಕೊಳ್ಳುವ ನಾಗರ ಹಾವೊಂದು ಪುತ್ತೂರಿನ ಕೆಮ್ಮಾಯಿ ಬಳಿ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಬೈಕ್ ನಡಿಗೆ ಬಿದ್ದು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದೆ.
ಹಾವು ಪ್ರಾಣ ಬಿಟ್ಟಿದ್ದನ್ನು ಹಿಂದಿನಿಂದ ಬರುತ್ತಿದ್ದ ಕೆಲವು ವಾಹನ ಸವಾರರು ನೋಡಿದ್ದಾರೆ. ತಮ್ಮ ವಾಹನವನ್ನು ನಿಲ್ಲಿಸಿ ಹಾವಿನ ಜೀವ ಉಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಹಾವು ಬದುಕುಳಿಯಲಿಲ್ಲ. ಅದು ಬನದ ಹಾವು ಅನ್ನುವುದು ಖಚಿತಗೊಂಡ ಬಳಿಕ ಅದನ್ನು ನೋಡಿದವರೆಲ್ಲರೂ ಶಾಸ್ತ್ರ ಪ್ರಕಾರ ಸರ್ಪದ ಅಂತ್ಯಕ್ರಿಯೆಗೆ ಮುಂದಾಗುತ್ತಾರೆ. ಬನದ ಹಾವಿನ ಸಾವನ್ನು ನೋಡಿದವರು, ಸಾವಿಗೆ ಕಾರಣರಾದವರು ಎಲ್ಲರೂ ಕೂಡ ಸರ್ಪ ದೋಷಕ್ಕೆ ತುತ್ತಾಗುತ್ತಾರೆ ಅನ್ನುವ ನಂಬಿಕೆ ತುಳುನಾಡಿನಲ್ಲಿ ತಲತಲಾಂತರದಿಂದ ನಡೆದು ಬಂದಿದೆ. ಹೀಗಾಗಿ ಅಂತ್ಯಕ್ರಿಯೆಗೆ ಅಗತ್ಯ ಸಿದ್ಧತೆ ನಡೆಸಲಾಗುತ್ತದೆ.
ರಸ್ತೆಯಲ್ಲಿಯೇ ಹಾವಿಗೆ ಬಿಳಿ ಬಟ್ಟೆ ಹೊದಿಸಲಾಗುತ್ತದೆ. ಬಳಿಕ ಅರ್ಚಕರ ಮುಖೇನ ಹಾವಿನ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಈ ನಡುವೆ ಆ ರಸ್ತೆಯಲ್ಲಿ ಬರುತ್ತಿದ್ದ ವಾಹನ ಸವಾರರು, ದುರ್ಘಟನೆಯನ್ನು ಕಣ್ಣಾರೆ ಕಂಡ ಚಾಲಕರು, ಸ್ಥಳೀಯರೆಲ್ಲರು ಸೇರಿ ಸರ್ಪ ಸಂಸ್ಕಾರಕ್ಕೆ ಅಗತ್ಯವಾಗಿರುವ ಹಣ ಸಂಗ್ರಹಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆಯಾದರೂ ಈ ಬಗ್ಗೆ ಖಚಿತ ಮಾಹಿತಿ ದೊರಕಿಲ್ಲ.