ನ್ಯೂಸ್ ನಾಟೌಟ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯದ ನಿವಾಸಿಗಳಿಗೆ ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ್ದಾರೆ. ಪ್ರಸ್ತುತ ಆಂಧ್ರಪ್ರದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ನಾಯ್ಡು ಈ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ಯ ಸರ್ಕಾರ ಜನಸಂಖ್ಯಾ ನಿರ್ವಹಣೆಗಾಗಿ ಹೊಸ ಯೋಜನೆ ರೂಪಿಸುತ್ತಿದೆ ಎಂದು ಶನಿವಾರ(ಅ.19) ಹೇಳಿದ್ದಾರೆ.
ಈ ಯೋಜನೆ ಮೂಲಕ, ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ ಸದ್ಯ ಯೋಜನೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವ ಕಾನೂನನ್ನು ಸಹ ಪರಿಗಣಿಸಲಾಗುತ್ತಿದೆ ಎಂದಿದ್ದಾರೆ.
ಜನಸಂಖ್ಯಾ ಅಸಮತೋಲನ ಸಮಸ್ಯೆಯನ್ನು ನಿವಾರಿಸಲು ಮತ್ತು ರಾಜ್ಯದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿರೋದ್ರಿಂದ ಇದೀಗ ಆಂಧ್ರ ರಾಜ್ಯ ಸರ್ಕಾರ ಹೊಸ ಯೋಜನೆ ರೂಪಿಸಲು ಸಿದ್ಧವಾಗಿದೆ. ಇದಕ್ಕಾಗಿ ಸಿಎಂ ಚಂದ್ರಬಾಬು ನಾಯ್ಡು ರಾಜ್ಯದ ಯುವಕರಿಗೆ ಹೆಚ್ಚು ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ್ದಾರೆ.
“ಈ ಹಿಂದೆ, ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಾವು ಕಾನೂನು ಮಾಡಿದ್ದೆವು. ಆದರೆ ಈಗ ನಾವು ಆ ಕಾನೂನನ್ನು ರದ್ದುಗೊಳಿಸಿದ್ದೇವೆ ಮತ್ತು ಅದನ್ನು ಹಿಂಪಡೆಯುವ ಬಗ್ಗೆ ಯೋಚಿಸುತ್ತಿದ್ದೇವೆ. ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ. ಅಂದಹಾಗೆ, ನಾವು 2047 ರವರೆಗೆ ಜನಸಂಖ್ಯಾ ಪ್ರಯೋಜನವನ್ನು ಹೊಂದಿದ್ದೇವೆ” ಎಂದಿದ್ದಾರೆ.
ಆದರೆ ದಕ್ಷಿಣದ ರಾಜ್ಯಗಳಲ್ಲಿ, ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ವಯಸ್ಸಾದವರ ಜನಸಂಖ್ಯೆಯು ಕಳವಳದ ವಿಷಯವಾಗಿದೆ. ಜಪಾನ್ ಮತ್ತು ಚೀನಾ ಸೇರಿದಂತೆ ಕೆಲವು ಯುರೋಪಿಯನ್ ದೇಶಗಳು ಸಹ ಈ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಹೇಳಿದರು. ಯುವಜನರು ದೇಶದ ಇತರ ಭಾಗಗಳಿಗೆ ಅಥವಾ ವಿದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಈ ಸಮಸ್ಯೆ ದಕ್ಷಿಣ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ದಕ್ಷಿಣದ ರಾಜ್ಯಗಳಲ್ಲಿ ಫಲವತ್ತತೆ ದರ ಕುಸಿಯುತ್ತಿರುವ ಬಗ್ಗೆಯೂ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು. ಇಲ್ಲಿ ಸಂತಾನೋತ್ಪತ್ತಿ ದರವು ಶೇಕಡಾ 1.6 ರಷ್ಟಿದೆ, ಇದು ರಾಷ್ಟ್ರೀಯ ದರ 2.1 ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿದರು. ಇದೇ ಪರಿಸ್ಥಿತಿ ಮುಂದುವರಿದರೆ, 2047ರ ವೇಳೆಗೆ ನಮ್ಮಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚಾಗಲಿದೆ. ಆಂಧ್ರಪ್ರದೇಶ ಮಾತ್ರವಲ್ಲ, ದೇಶದ ಅನೇಕ ಹಳ್ಳಿಗಳಲ್ಲಿ ಈಗ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
Click