ನ್ಯೂಸ್ ನಾಟೌಟ್: ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಆದರೆ ಇಲ್ಲೊಂದು ಜೋಡಿ ಆನ್ಲೈನ್ ನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ.
ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ನಿವಾಸಿ ಹಾಗೂ ಬಿಜೆಪಿ ಕಾರ್ಪೊರೇಟರ್ ತೆಹಸಿನ್ ಶಾಹಿದ್ ಎಂಬವರು ತನ್ನ ಪುತ್ರ ಮೊಹಮ್ಮದ್ ಅಬ್ಬಾಸ್ ಹೈದರ್ ಎಂಬಾತನಿಗೆ ಲಾಹೋರ್ನಲ್ಲಿ ನೆಲೆಸಿರುವ ಸಂಬಂಧಿಕರ ಪುತ್ರಿ ಅಂದಲೀಬ್ ಜಹಾರ ಜತೆ ವಿವಾಹ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಕಳೆದ ವರ್ಷವೇ ಮಾರುಕತೆ ನಡೆದಿತ್ತು. ಆದರೆ ವರನ ಕುಟುಂಬ ವೀಸಾ ಪಡೆಯಲು ಸಾಕಷ್ಟು ಪ್ರಯತ್ನಪಟ್ಟರೂ ಲಭಿಸಲಿಲ್ಲ. ಇದಕ್ಕಾಗಿ ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿತ್ತಾದರೂ, ಈವರೆಗೆ ದೊರೆತಿಲ್ಲ ಎನ್ನಲಾಗಿದೆ. ಅಲ್ಲದೇ ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದರು. ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಈ ನಡುವೆ ವೀಸಾ ದೊರಕುವುದು ಕೂಡ ವಿಳಂಬವಾಯಿತು. ಇದರಿಂದಾಗಿ ಅವರು ತಮ್ಮ ಮಗಳ ಮದುವೆ ನೋಡುವ ಬಯಕೆ ವ್ಯಕ್ತಪಡಿಸಿದ್ದರಿಂದ ಎರಡೂ ಕುಟುಂಬಗಳು ಆನ್ಲೈನ್ ಮೂಲಕ ತಕ್ಷಣ ಮದುವೆ ಮಾಡಲು ನಿಶ್ಚಯಿಸಿದ್ದವು.
ವರ ಹಾಗೂ ಅವರ ಕುಟುಂಬದವರು, ಅತಿಥಿಗಳು ಶುಕ್ರವಾರ ‘ಇಮಾಂಬರ’ಕ್ಕೆ (ಶಿಯಾ ಸಮುದಾಯದವರ ಪವಿತ್ರ ಮಂದಿರ) ತಲುಪಿದ್ದರು. ಆನ್ಲೈನ್ ಮೂಲಕವೇ ನಡೆದ ಮದುವೆಯನ್ನು ಅವರೆಲ್ಲ ಟಿವಿ ಸ್ಕ್ರೀನ್ ಮೂಲಕ ಕಣ್ತುಂಬಿಕೊಂಡು, ನವ ದಂಪತಿಗೆ ಹಾರೈಸಿದ್ದಾರೆ. ಸಮಾರಂಭಕ್ಕೆ ಜಿಲ್ಲೆಯ ಬಿಜೆಪಿ ನಾಯಕರೂ ಬಂದಿದ್ದರು. ಬಳಿಕ ಅದ್ದೂರಿ ಭೋಜನಕೂಟ ನಡೆದಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೈದರ್ ಅವರು, ತಮ್ಮ ಪತ್ನಿಗೆ ಕೂಡಲೇ ವೀಸಾ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪಿಒಕೆ ವಿವಾದ, ಉಗ್ರ ಚಟುವಟಿಕೆ ಸೇರಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ತೀವ್ರಗೊಳ್ಳುತ್ತಲೇ ಇದೆ. ಈ ನಡುವೆ, ಉಭಯ ದೇಶಗಳ ವಧು ಹಾಗೂ ವರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಭಾರಿ ಸುದ್ದಿಯಾಗಿದೆ.