ನ್ಯೂಸ್ ನಾಟೌಟ್: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೀಗ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸುಳ್ಯ , ಪುತ್ತೂರು, ಬೆಳ್ತಂಗಡಿ, ಕಡಬ, ಮಂಗಳೂರು, ಮೂಡಬಿದಿರೆ, ಮೂಲ್ಕಿ, ಉಳ್ಳಾಲ ಸೇರಿದಂತೆ ಹಲವು ಕಡೆಯ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ಗುರುತಿಸಲಾಗಿದೆ. ಈ ಕಾರ್ಡ್ ಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54,093 ಮತ್ತು ಉಡುಪಿ ಜಿಲ್ಲೆಯಲ್ಲಿ 39,627 ಕಾರ್ಡ್ಗಳ ಪರಿ ಶೀಲನೆಗೆ ಸೂಚನೆ ಬಂದಿದೆ. ಈ ಪೈಕಿ ಶೇ. 2ರಷ್ಟು ಕಾರ್ಡ್ ರದ್ದಾಗಲಿದೆ ಎನ್ನುವ ಮಾಹಿತಿಗಳಿವೆ. ಸದ್ಯ ಈ ಪ್ರಕ್ರಿಯೆಯಿಂದ ಪಡಿತರದಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣಗೊಂಡರೂ ಅಚ್ಚರಿ ಇಲ್ಲ. ಮೊದಲಿಗೆ ಅನರ್ಹ ಆಗುವ ಸಾಧ್ಯತೆಯ ಪಡಿತರ ಚೀಟಿಯ ಮಾಹಿತಿಯನ್ನು ಎಲ್ಲ ಪಡಿತರ ವಿತರಕರಿಗೆ ರವಾನಿಸಲಾಗಿದೆ. ಆದಾಯ ಮತ್ತು ಮನೆಯ ಪರಿಸ್ಥಿತಿ ಅವಲೋಕಿಸಿಯೇ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದೆ.
ಆಹಾರ ಇಲಾಖೆ ಕಳುಹಿಸಿರುವ ಪಟ್ಟಿ ಪ್ರಕಾರ ಪುತ್ತೂರು ತಾಲೂಕಿನಲ್ಲಿ 5,402, ಸುಳ್ಯ 2,998, ಬಂಟ್ವಾಳ 8,835, ಬೆಳ್ತಂಗಡಿ 7,075, ಕಡಬ 2,911, ಮಂಗಳೂರು 14,092, ಮೂಡಬಿದಿರೆ 2,865, ಮೂಲ್ಕಿ 1,932, ಉಳ್ಳಾಲ 7,983 ಬಿಪಿಎಲ್ ಕಾರ್ಡ್ದಾರರನ್ನು ಅನರ್ಹ ಪಟ್ಟಿಯಲ್ಲಿ ಗುರುತಿಸಲಾಗಿದೆ. ಅನರ್ಹ ಕಾರ್ಡ್ಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
2016ರಲ್ಲಿ ಆಹಾರ ಇಲಾಖೆ ನಿಗದಿ ಮಾಡಿದ ಮಾನದಂಡದಂತೆ, ಸರಕಾರಿ, ಅರೆ ಸರಕಾರಿ ಖಾಯಂ ನೌಕರರಾಗಿರಬಾರದು, ವೃತ್ತಿ ತೆರಿಗೆ, ಜಿಎಸ್ಟಿ, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್ಗಿಂತ ಹೆಚ್ಚು ಭೂಮಿ ಹೊಂದಿರಬಾರದು, ನಗರದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರಬಾರದು, ಟ್ರ್ಯಾಕ್ಟರ್, ಕ್ಯಾಬ್, ಟ್ಯಾಕ್ಸಿ ಹೊರತಾಗಿ ಖಾಸಗಿ ಕಾರು ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿರಬಾರದು. ಈ ಮಾನದಂಡ ಮೀರಿದರೆ ಕಾರ್ಡ್ ರದ್ದಾಗಲಿದೆ.
ಉಡುಪಿ ಜಿಲ್ಲೆಯ 39,627 ಬಿಪಿಎಲ್ ಕಾರ್ಡ್ ಗಳು ಅನರ್ಹತೆ ಹೊಂದಬಹುದಾದ ಪಟ್ಟಿಯಲ್ಲಿದ್ದು, ಪರಿಶೀಲನೆಗೆ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಕಳುಹಿಸಲಾಗಿತ್ತು. ಈ ಪೈಕಿ 34,112 ಕಾರ್ಯಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. 5,515 ಕಾರ್ಡ್ ಗಳ ಪರಿಶೀಲನೆ ಬಾಕಿಯಿದೆ. 39,627 ಕಾರ್ಡ್ಗಳಲ್ಲಿ ಕೇವಲ 464 ಕಾರ್ಡ್ ಮಾತ್ರ ಅನರ್ಹ ಎಂಬುದು ತಿಳಿದು ಬಂದಿದೆ. ಅನರ್ಹತೆ ಸಾಧ್ಯತೆ ಪಟ್ಟಿಯಲ್ಲಿ ಇರುವ ಕಾರ್ಡ್ಗಳು ಕಾರ್ಕಳ-6,689, ಕುಂದಾಪುರ-7,551, ಉಡುಪಿ-11,238, ಕಾಪು-4,943, ಬ್ರಹ್ಮಾವರ-5,928, ಬೈಂದೂರು-2,056, ಹೆಬ್ರಿ-1,222, ಒಟ್ಟು-39627 ಕಾರ್ಡ್ ಗಳು ಎಂದು ಹೇಳಲಾಗಿದೆ.